Advertisement

ಗರ್ಭಪಾತಕ್ಕೆ ಅನುಮತಿ ನೀಡಲು ಕೋರಿ ಹೈಕೋರ್ಟ್‌ಗೆ ಮೊರೆ

06:00 AM Dec 14, 2018 | Team Udayavani |

ಬೆಂಗಳೂರು: ನಿರ್ದಿಷ್ಟ ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಮಹಿಳೆಯೊಬ್ಬರು ಹೈಕೋರ್ಟ್‌ ಮೊರೆ ಹೋಗಿ ದ್ದಾರೆ. ಈ ಕುರಿತಂತೆ 29 ವರ್ಷದ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆಗೆ ಅಂಗೀಕರಿಸಿತು.

Advertisement

ವಿಚಾರಣೆ ವೇಳೆ, ಅರ್ಜಿದಾರ ಮಹಿಳೆಯ ಪರ ವಕೀಲರು, “ಭ್ರೂಣದ ಬೆಳವಣಿಗೆ ನ್ಯೂನತೆಯಿಂದ ಕೂಡಿದೆ. ಭ್ರೂಣಕ್ಕೆ ಈಗ 20
ವಾರ ತುಂಬಿದೆ. ಆದರೆ, ಗರ್ಭಸ್ಥ ಶಿಶುವಿನ ಅನ್ನನಾಳದ ಬೆಳವಣಿಗೆಯೇ ಆಗಿಲ್ಲ. ಈ ಕಾರಣಕ್ಕೆ ಮಗು ಜನಿಸಿದ ಮೇಲೆ ತೊಂದರೆಗೆ ಒಳಗಾಗಲಿದೆ, ಹೆರಿಗೆ ಸಮಯದಲ್ಲಿ ತಾಯಿಗೂ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಗರ್ಭಪಾತಕ್ಕೆ ಅನಮತಿ ಕೊಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ಖಾಸಗಿ ವೈದ್ಯರ ವರದಿ ಆಧಾರದ ಮೇಲೆ ಇದನ್ನು ನಿರ್ಧರಿಸಲು ಆಗುವುದಿಲ್ಲ. ತಜ್ಞ ವೈದ್ಯರ ವರದಿ ತರಿಸಿಕೊಂಡು ಪರಿಶೀಲಿಸಿದ ನಂತರ ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಸರ್ಕಾರಿ ವಕೀಲರ ವಾದವನ್ನು ಒಪ್ಪಿದ ನ್ಯಾಯಪೀಠ, ತಕ್ಷಣ ವೈದ್ಯಕೀಯ ಅಧೀಕ್ಷಕರ ನೇತೃತ್ವದಲ್ಲಿ ವಾಣಿ ವಿಲಾಸ
ಆಸ್ಪತ್ರೆಯ ತಜ್ಞ ವೈದ್ಯರ ತಂಡ ರಚಿಸಬೇಕು ಮತ್ತು ಶುಕ್ರವಾರ (ಡಿ.14) ಬೆಳಿಗ್ಗೆ 11 ಗಂಟೆಗೆ ಮಹಿಳೆಯ ಪರೀಕ್ಷೆ ನಡೆಸಬೇಕು. ವೈದ್ಯರ ವರದಿಯನ್ನು ಡಿ. 17ಕ್ಕೆ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next