Advertisement

ಶಾಲಾ ಜಮೀನಿನ  ಗಡಿ ಗುರುತಿಗೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ

03:05 AM Jul 18, 2017 | |

ಕಡಬ : ನೂಜಿಬಾಳ್ತಿಲ ಗ್ರಾಮದ ಅಡಂಜೆ ಸರಕಾರಿ ಕಿ.ಪ್ರಾ.ಶಾಲಾ ಜಮೀನನ್ನು ಅಳತೆ ಮಾಡಿ ಗಡಿ ಗುರುತು ಮಾಡಬೇಕೆಂದು ಸಲ್ಲಿಸಿದ ಮನವಿಗೆ ಭೂ ಮಾಪನಾ ಇಲಾಖಾಧಿಕಾರಿಗಳು ಸ್ಪಂದಿಸುತ್ತಿಲ್ಲ  ಎಂದು ಆರೋಪಿಸಿರುವ ಶಾಲಾಭಿವೃದ್ಧಿ  ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಕಡಬ ತಹಶೀಲ್ದಾರ್‌ ಕಚೇರಿಗೆ ತೆರಳಿ  ಕೂಡಲೇ ಜಾಗದ ಅಳತೆ  ಮಾಡಿ ಗಡಿ ಗುರುತು ಮಾಡಿಕೊಡಬೇಕೆಂದು ಆಗ್ರಹಿಸಿದ ಘಟನೆ ನಡೆದಿದೆ.

Advertisement

ಅಡಂಜೆ ಶಾಲೆಗೆ ಸಂಬಂಧಿಸಿ ಸರ್ವೆ ನಂ. 72/1(ಪಿ22)ರಲ್ಲಿ 1.65 ಎಕ್ರೆ ಜಮೀನು ಇದೆ. ಸದ್ರಿ ಜಮೀನನ್ನು ಅಳತೆ ಮಾಡಿ ಗಡಿ ಗುರುತಿಸಿಕೊಡಬೇಕೆಂದು ಕಡಬ ವಿಶೇಷ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ  6 ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ ಭೂ ಮಾಪಕರು ಜಾಗದ ಗಡಿಯ ಕುರಿತು ಗೊಂದಲ ಇದೆ ಎಂದು ಹೇಳಿ ಅಳತೆ ಕಾರ್ಯವನ್ನು ಪೂರ್ತಿಗೊಳಿಸದೆ ಹಿಂದಿರುಗಿದ್ದರು. ಆ ಬಳಿಕ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಲವಾರು ಬಾರಿ ಕಡಬದ ಭೂ ಮಾಪನಾ ಇಲಾಖಾ ಕಚೇರಿಗೆ ಭೇಟಿ ನೀಡಿ ಅಳತೆಯನ್ನು ಪೂರ್ತಿಗೊಳಿಸಿ ಗಡಿ ಗುರುತು ಮಾಡಿಕೊಡುವಂತೆ ಕೇಳಿ ಕೊಂಡರೂ ಪ್ರಯೋಜನವಾಗಿರಲಿಲ್ಲ.  ಆದುದರಿಂದ  ಮನವಿ ಸಲ್ಲಿಸುವ ವೇಳೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೇಶವ ಗೌಡ ಬಳ್ಳೇರಿ, ಉಪಾಧ್ಯಕ್ಷೆ ರಾಜೇಶ್ವರಿ ಕೆರ್ನಡ್ಕ, ಪದಾಧಿಕಾರಿಗಳಾದ ಜಯಪ್ರಕಾಶ್‌, ಪ್ರೇಮಾ, ಮೇದಪ್ಪ ಗೌಡ, ಕುಸುಮಾವತಿ ಬಳ್ಳೇರಿ, ಲೀಲಾವತಿ ಬಳಕ್ಕ, ಹೇಮಾವತಿ ಬಳಕ್ಕ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಜು. 24 ರಂದು ಜಮೀನಿನ ಅಳತೆ
ಶಾಲಾ ಜಮೀನನ್ನು ಅಳತೆ ಮಾಡಿ ಗಡಿ ಗುರುತು ಮಾಡಿಕೊಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ತಹಶೀಲ್ದಾರ್‌, ಭೂ ಮಾಪನಾ ಇಲಾಖೆ ಹಾಗೂ ಕಂದಾಯ ನಿರೀಕ್ಷಕರ ಕಚೇರಿಗೆ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಭೇಟಿ ನೀಡಿ ಮತ್ತೆ ಮನವಿ ಸಲ್ಲಿಸಿದ್ದೇವೆ. ಜು. 24ರಂದು ಜಾಗದ ಅಳತೆ ಮಾಡಿ ಗಡಿ ಗುರುತು ಮಾಡಿಕೊಡುವುದಾಗಿ ಭೂಮಾಪನಾ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. 

ಜಾಗ ಗಡಿಯ ಕುರಿತು ಗೊಂದಲ ಇರುವುದಾಗಿ ಭೂಮಾಪಕರು ಹೇಳಿರುವುದರಿಂದ ಅದನ್ನು ಬಗೆಹರಿಸಲು ಅಳತೆಯ ಸಮಯದಲ್ಲಿ ತಹಶೀಲ್ದಾರ್‌ ಹಾಗೂ ಕಂದಾಯ ನಿರೀಕ್ಷಕರು ಕೂಡ ಸ್ಥಳಕ್ಕೆ ಬರಬೇಕೆಂದು ಮನವಿ ಮಾಡಿದ್ದೇವೆ. ಒಂದು ವೇಳೆ ಆ ದಿನ ಅಳತೆ ಪೂರ್ತಿಗೊಳಿಸಿ ಜಾಗದ ಗಡಿ ಗುರುತು ಮಾಡಿಕೊಡದಿದ್ದಲ್ಲಿ ಕಡಬ ತಹಶೀಲ್ದಾರ್‌ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೇಶವ ಗೌಡ ಬಳ್ಳೇರಿ ಎಚ್ಚರಿಸಿದ್ದಾರೆ.

ಆಗ್ರಹ
ಕೂಡಲೇ ಈ ಕುರಿತು ಗಮನಹರಿಸಿ ಶಾಲೆಯ ಜಮೀನಿನ  ಗಡಿ ಗುರುತು ಮಾಡಿಕೊಡಬೇಕೆಂದು ಕಡಬ ತಹಶೀಲ್ದಾರ್‌, ಕಂದಾಯ ನಿರೀಕ್ಷಕರು ಹಾಗೂ ಭೂಮಾಪನಾ ಇಲಾಖಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next