ಮುದಗಲ್ಲ: ಲಿಂಗಸುಗೂರ ತಾಲೂಕಿನ ಗಡಿ ಭಾಗದಗ್ರಾಮಗಳಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಯಂ ವೈದ್ಯರ ನೇಮಕ ಸೇರಿ ವಿವಿಧ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮಾಕಾಪುರ ಮತ್ತು ಸುತ್ತಲಿನ ಗ್ರಾಮಗಳ ಮುಖಂಡರು ಶಾಸಕ ಡಿ.ಎಸ್. ಹೂಲಗೇರಿ ಅವರಿಗೆ ಮನವಿ ಸಲ್ಲಿಸಿದರು.
ಮಾಕಾಪುರ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಲು ಆಗಮಿಸಿದ ಶಾಸಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಮಾಕಾಪುರ ಗ್ರಾಮ ಗಣಿಗಾರಿಕೆಯಿಂದ ಹೆಸರುವಾಸಿ ಯಾಗಿದೆ. ಶೈಕ್ಷಣಿಕ ಅಭಿವೃದ್ಧಿಗಾಗಿ ತನ್ನದೇ ಆದ ಹೆಸರು ಪಡೆದಿದೆ.
ಈ ಭಾಗದಲ್ಲಿ ಈಗಾಗಲೇ ಹೂನೂರು, ಬನ್ನಿಗೋಳ ಪ್ರೌಢ ಶಾಲೆಗಳನ್ನು ಹೊಂದಿವೆ. ಲಿಂಗಸುಗೂರು ತಾಲೂಕಿನಗಡಿ ಭಾಗದ ಕುಷ್ಟಗಿ ತಾಲೂಕಿನ ಹಳ್ಳಿಗಳಲ್ಲಿ ಪ್ರೌಢಶಾಲೆಗಳಿವೆ. ಮಾಕಾಪುರ ಗ್ರಾಮ ಕೇಂದ್ರ ಸ್ಥಾನವಾಗಿದ್ದು, ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಪದವಿ ಪೂರ್ವ ಕಾಲೇಜು ಆರಂಭಿಸಬೇಕು. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿಗೆ ವಸತಿಗೃಹಗಳಿಲ್ಲ. ಗ್ರಂಥಾಲಯಗಳಿಲ್ಲ. ಬಸ್ ಸೌಲಭ್ಯ ಕೊರತೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸುವಂತಾಗಿದೆ.
ಆದ್ದರಿಂದ ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಕಾಯಂ ವೈದ್ಯರ ನೇಮಕ, ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ, ಮಾಕಾಪುರ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಬೇಕು. ವಿವಿಧ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಪಂ ಸದಸ್ಯ ವೀರೇಶ, ಬಸನಗೌಡ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.