ಮಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಮಲೇಶ್ಯಾದಲ್ಲಿ ಬಂದಿಯಾಗಿರುವ ಮಂಗಳೂರು ಕೆಎಂಸಿಯ ಇಬ್ಬರು ವಿದ್ಯಾರ್ಥಿಗಳು ಭಾರತಕ್ಕೆ ಬರಲು ಸಹಾಯ ಮಾಡಿ ಎಂದು ವೀಡಿಯೋ ಮೂಲಕ ಸರಕಾರ, ಜನಪ್ರತಿನಿಧಿಗಳನ್ನು ಕೇಳಿಕೊಂಡಿದ್ದಾರೆ.
ಮಂಗಳೂರಿನ ಕೆಎಂಸಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ನವೀನ್ ಮಲ್ಯ ಮತ್ತು ಮಹಿಮಾ ಗುಪ್ತ ಅವರು ಒಂದು ತಿಂಗಳ ಇಂಟರ್ನ್ ಶಿಪ್‌ಗಾಗಿ ಮಲೇಶ್ಯಾದ ನೀಲೈಯ ವೈದ್ಯಕೀಯ ಕಾಲೇಜಿಗೆ ಮಾ. 12ರಂದು ತೆರಳಿದ್ದರು.
ಮಾ. 17ರಿಂದ ಮಲೇಶ್ಯಾದಲ್ಲಿ ಲಾಕ್‌ಡೌನ್ ಆಗಿರುವುದರಿಂದ ಅವರು ಅಲ್ಲಿ ಇಂಟರ್ನ್ಶಿಪ್ ಮಾಡಲಾಗದೇ ಭಾರತಕ್ಕೆ ಬರಲೂ ಆಗದೆ ಸಮಸ್ಯೆಯಲ್ಲಿದ್ದಾರೆ. ಹೀಗಾಗಿ ವೀಡಿಯೋ ಮುಖಾಂತರ ತಮ್ಮ ಕಷ್ಟಗಳನ್ನು ತಿಳಿಸಿ ಭಾರತಕ್ಕೆ ಕರೆದುಕೊಳ್ಳುವಂತೆ ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.
“ಕೆಎಂಸಿ ಆಸ್ಪತ್ರೆಯಿಂದಲೂ ಭಾರತ ಸರಕಾರದ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಮಾಹಿತಿ ರವಾನಿಸಲಾಗಿದೆ. ನಾವೂ ಭಾರತಕ್ಕೆ ಮರಳಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ. ಆದರೆ ಈ ವರೆಗೆ ಯಾವುದೇ ಸೂಕ್ತ ವ್ಯವಸ್ಥೆ ಆಗಿಲ್ಲ’ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವ ಬಗ್ಗೆ “ಉದಯವಾಣಿ’ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರನ್ನು ಈ ಹಿಂದೆಯೇ ಸಂಪರ್ಕಿಸಿ ಮಾಹಿತಿ ನೀಡಿತ್ತು. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಖಾತೆಗೆ ಇ ಮೇಲ್ ಮಾಡಿದಲ್ಲಿ ಸ್ಪಂದಿಸುವುದಾಗಿ ಹೇಳಿದ್ದರು. ಆ ಬಳಿಕ ಇ ಮೇಲ್ ಮಾಡಲಾಗಿದ್ದರೂ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.