Advertisement

ವಸತಿಗೃಹ ಖಾಲಿ ಮಾಡಿಸದಿರಲು ಆಗ್ರಹ

02:30 PM Sep 17, 2019 | Suhan S |

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಗೆ ಸೇರಿದ ಕಾರ್ಮಿಕ ವಸತಿ ಗೃಹಗಳಲ್ಲಿ ವಾಸವಿರುವ ನಿವೃತ್ತ ಕಾರ್ಮಿಕರನ್ನು ಮನೆ ಖಾಲಿ ಮಾಡುವಂತೆ ಆಡಳಿತ ಮಂಡಳಿ ನೋಟಿಸ್‌ ನೀಡುವ ಪ್ರಕ್ರಿಯೆಗೆ ಮುಂದಾಗಿರುವುದನ್ನು ಖಂಡಿಸಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಸಂಘ ಸೋಮವಾರ ಕಾರ್ಖಾನೆಯ ನ್ಯೂಟೌನ್‌ ನೋಟಿಫೈಡ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

Advertisement

ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ, ನಿವೃತ್ತ ಕಾರ್ಮಿಕರ ಬದುಕು ಸಂಕಷ್ಟದಲ್ಲಿದ್ದು, ಅನಾರೋಗ್ಯದಿಂದ ನರಳುತ್ತಿದ್ದಾರೆ. ಮಕ್ಕಳು ಕೆಲಸವಿಲ್ಲದೆ ಅವರ ಆಶ್ರಯದಲ್ಲಿದ್ದಾರೆ. ಕೆಲವು ಮಕ್ಕಳು ತಂದೆ, ತಾಯಿಯರನ್ನು ಬಿಟ್ಟು ಬೇರೆಡೆ ವಾಸವಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿವೃತ್ತ ಕಾರ್ಮಿಕರನ್ನು ಕಾರ್ಖಾನೆಯ ಆಡಳಿತ ಮಂಡಳಿ ಮನೆ ಖಾಲಿಮಾಡಿಸಲು ಹೊರಟಿರುವ ಕ್ರಮ ಸರಿಯಲ್ಲ. ಕಾರ್ಖಾನೆ ಸಂಕಷ್ಟದಲ್ಲಿದೆ. ಅದನ್ನು ಉಳಿಸಲು ಆಡಳಿತ ಮಂಡಳಿ ಪ್ರಯತ್ನಿಸಬೇಕಿದೆ. ಆದರೆ ಅದರ ಬದಲು ನಿವೃತ್ತ ಕಾರ್ಮಿಕರನ್ನು ಮನೆ ಖಾಲಿ ಮಾಡಿಸಲು ನೋಟಿಸ್‌ ನೀಡುತ್ತಿರುವುದು ಸರಿಯಲ್ಲ. ಖಾಲಿ ಮಾಡಿಸಿ ಏನು ಮಾಡುತ್ತೀರಿ? ಅಲ್ಲಿ ಅವರು ವಾಸವಿರುವುದರಿಂದ ಮನೆಗಳು ಸುವ್ಯವಸ್ಥೆಯಲ್ಲಿ ಉಳಿದಿವೆ. ಇಲ್ಲವಾಗಿದ್ದರೆ ಆ ಮನೆಗಳೂ ಸಹ ಉಳಿದ ಖಾಲಿ ವಸತಿಗೃಹಗಳಂತೆ ಹಾಳಾಗಿ ಹೋಗಿರುತ್ತಿದ್ದವು. ನಿವೃತ್ತ ಕಾರ್ಮಿಕರು ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡಬಾರದು ಎಂದು ಹೇಳಿದರು.

ಶಾಸಕ ಬಿ.ಕೆ.ಸಂಗಮೇಶ್‌ ಮಾತನಾಡಿ, ಕಾರ್ಖಾನೆಯ ಉಳಿವಿಗೆ ರಾಜ್ಯ ಸರ್ಕಾರ ಅಗತ್ಯ ಅದಿರಿನ ಗಣಿಯನ್ನು ಒದಗಿಸಿದರೂ ಕೇಂದ್ರ ಸರ್ಕಾರ ಅದನ್ನು ಉಳಿಸುವ ಪ್ರಯತ್ನ ಮಾಡುತ್ತಿಲ್ಲ. ಸೈಲ್ ಅಥಾರಿಟಿ ಬಗ್ಗೆ ಗಮನಹರಿಸದೆ ನಿವೃತ್ತ ಕಾರ್ಮಿಕರನ್ನು ಮನೆ ಖಾಲಿ ಮಾಡಿಸುವ ಕಡೆ ಹೆಚ್ಚಿನ ಗಮನ ಹರಿಸುತ್ತಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ನಿವೃತ್ತ ಕಾರ್ಮಿಕರು ಮನೆ ಖಾಲಿ ಮಾಡುವುದಿಲ್ಲ ಎಂದ ಅವರು, ಪ್ರತಿಭಟನಾ ಸ್ಥಳಕ್ಕೆ ಕಾರ್ಖಾನೆಯ ಕಾರ್ಯಪಾಲ ನಿರ್ದೇಶಕ ಕೆ.ಎಲ್.ಎಸ್‌.ರಾವ್‌ ಅವರನ್ನು ಕರೆಸಿ ಮಾತನಾಡಿದರು.

ಪ್ರತಿಭಟನಾಕಾರರು ಕಾರ್ಯಪಾಲ ನಿರ್ದೇಶಕರಿಗೆ ಮನವಿ ಸಲ್ಲಿಸಿ ನಿವೃತ್ತ ಕಾರ್ಮಿಕರು ಸದರಿ ವಸತಿ ಗೃಹಗಳನ್ನು 2ರಿಂದ 3 ಲಕ್ಷದವರೆಗೆ ಖರ್ಚು ಮಾಡಿ ವಾಸಕ್ಕೆ ಯೋಗ್ಯವನ್ನಾಗಿ ಮಾಡಿ ಅಭಿವೃದ್ಧಿಪಡಿಸಿ ಕೊಂಡಿರುತ್ತೇವೆ. ನಿವೃತ್ತಿ ನಂತರ ಅನಾರೋಗ್ಯದಿಂದ ಬಳಲುತ್ತಿರುವ ನಮ್ಮನ್ನು ವಸತಿ ಗೃಹದಿಂದ ಖಾಲಿ ಮಾಡಿಸಬಾರದು. ಈಗಿರುವ ಭೋಗ್ಯದ ಅವಧಿಯನ್ನು 33 ತಿಂಗಳಿಗೆ ನವೀಕರಣಗೊಳಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯಪಾಲ ನಿರ್ದೇಶಕ ಕೆ.ಎಲ್.ಎಸ್‌.ರಾವ್‌ ಮನವಿಯನ್ನು ಕಾರ್ಖಾನೆಯ ಸೈಲ್ ಆಡಳಿತದ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

Advertisement

ಸಂಘದ ಅಧ್ಯಕ್ಷ ನಾಗಭೂಷಣ, ಮುಖಂಡರಾದ ಎಸ್‌.ಎನ್‌.ಬಾಲಕೃಷ್ಣ, ಭೈರಪ್ಪಗೌಡ, ನರಸಿಂಹಾಚಾರ್‌, ಕೃಷ್ಣೇಗೌಡ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next