ಬೆಂಗಳೂರು: ಮುಗ್ಧ ಜನರನ್ನು ಮತಾಂತರ ಮಾಡುವ ಉದ್ದೇಶದಿಂದ ಪ್ರೇ ಫಾರ್ ಇಂಡಿಯಾ ಆಯೋಜಿಸುತ್ತಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಅ. 26ರಿಂದ 27 ವರೆಗೆ ಬೆಂಗಳೂರಿನ ತ್ರಿಪುರಾವಾಸಿನಿ ಅರಮನೆ ಮೈದಾನದಲ್ಲಿ ಪ್ರೇ ಫಾರ್ ಇಂಡಿಯಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೊಂಡುರಾನ್ ದೇಶದ ಅಪೋಸ್ಟಲ್ ಗುಲಿರ್ಮೊ ಮಾಲ್ಡೊನಾಡೋ ಎಂಬವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆಮಂತ್ರಣದಲ್ಲಿ ಹೇಳಿದಂತೆ ಇದರಲ್ಲಿ ದೇವರ ಅತೀಂದ್ರೀಯ ಶಕ್ತಿಗಳ ಅನುಭವ ಮತ್ತು ಆವಿಷ್ಕಾರ ಆಗಲಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರ ಒಂದು ಕಡೆ ಮೌಡ್ಯತೆಯನ್ನು ತಡೆಯಲು ಪ್ರತ್ಯೇಕ ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಚಿಂತಿಸಿದೆ. ಹೀಗಿರುವಾಗ ಬಹಿರಂಗವಾಗಿ ಮೌಡ್ಯತೆಯನ್ನು ಪ್ರಸಾರ ಮಾಡಿ, ಅಮಾಯಕ ಜನರ ಸುಲಿಗೆ, ಶೋಷಣೆ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ. ಅಷ್ಟೇ ಅಲ್ಲದೇ ಮಾಲ್ಡೊನಾಡೋ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಅವರಿಗೆ ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮತ್ತು ಅವರ ಮತದ ಪ್ರಚಾರ ಮಾಡುವುದು ವೀಸಾ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಪೋಸ್ಟಲ್ ಗುಲಿರ್ಮೊ ಮಾಲ್ಡೊನಾಡೋ ಯುಎಸ್‌ಎ ಮೂಲದ ಕಿಂಗ್ ಜೀಸಸ್ ಮಿನಿಸ್ಟ್ರೀ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಜೀಸಸ್ ಈ ಭೂಮಿಯನ್ನು ಕ್ರೈಸ್ತ ಭೂಮಿಯನ್ನಾಗಿ ಮಾಡಲು ನನಗೆ ಅತೀಂದ್ರೀಯ ಶಕ್ತಿ ಕರುಣಿಸಿದ್ದಾನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಈಗ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಭಾರತದ ಬೇಡೆ ಇಂತಹ ಕಾರ್ಯಕ್ರಮಗಳನ್ನು ಮಾಡಿ 45,000 ಜನರನ್ನು ಮತಾಂತರ ಮಾಡಿರುವ ಬಗ್ಗೆ ಕೆಲ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಈ ಹಿನ್ನೆಲೆಯಲ್ಲಿ ಅಪೋಸ್ಟಲ್ ಗುಲಿರ್ಮೊ ಮಾಲ್ಡೊನಾಡೋ ರಾಜ್ಯಕ್ಕೆ ಬರದಂತೆ ಸೂಚಿಸಬೇಕು. ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮ ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.