Advertisement

ಮುಷ್ಟಿ ಧಾನ್ಯ ಅಭಿಯಾನ ತಡೆಗೆ ಕೈ ಪಡೆ ಮನವಿ

11:42 AM Apr 06, 2018 | Team Udayavani |

ದಾವಣಗೆರೆ: ಚುನಾವಣಾ ಪ್ರಚಾರದ ನಡುವೆಯೇ ಬ್ರೇಕ್‌ನಂತೆ ಮದುವೆ ಸಮಾರಂಭಕ್ಕೆ ಹಾಜರಾದ ಜಿಲ್ಲಾ ಉಸ್ತುವಾರಿ ಸಚಿವರು, ಮಹಾನಗರ ಪಾಲಿಕೆ ವ್ಯಾಪ್ತಿಯ 18 ಮತ್ತು 19ನೇ ವಾರ್ಡ್‌ನಲ್ಲಿ ಮುಷ್ಟಿ ಧಾನ್ಯ ಅಭಿಯಾನ ಪ್ರಚಾರ ಕೈಗೊಂಡ ಮಾಜಿ ಸಚಿವರು, ಖಾಸಗಿ ಸಮಾರಂಭದಲ್ಲಿ ಪಾಲ್ಗೊಂಡ ಕಾಂಗ್ರೆಸ್‌ ಶಾಸಕರು, ಬಿರುಸಿನ ಪ್ರಚಾರ ಮುಂದುವರೆಸಿದ ಜೆಡಿಎಸ್‌ ಶಾಸಕರು, ಜಿಲ್ಲೆಯಲ್ಲಿ ಬಿಜೆಪಿ ನಡೆಸುತ್ತಿರುವ ಮುಷ್ಟಿ ಧಾನ್ಯ ಅಭಿಯಾನ ತಡೆಗೆ ಕಾಂಗ್ರೆಸ್‌ ಜಿಲ್ಲಾಡಳಿತಕ್ಕೆ ಮನವಿ… ಇವು, ಗುರುವಾರ ಜಿಲ್ಲೆಯಲ್ಲಿ ಕಂಡು ಬಂದ ರಾಜಕೀಯ ಚಟುವಟಿಕೆಗಳು. ಮತದಾನದ ದಿನ ಸಮೀಪಿಸುತ್ತಿರುವಂತೆ ಪ್ರಚಾರದ ಮೂಲಕ ಮತದಾರರ ಮನ ಗೆಲ್ಲುವ ಪ್ರಯತ್ನ ಮುಂದುವರೆದಿದೆ.

Advertisement

ಕಳೆದ ಎರಡು ದಿನಗಳ ಕಾಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿ ಜೊತೆ ಎಡಬಿಡದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿದ್ದರು. ಮದುವೆ ಸಮಾರಂಭದಲ್ಲಿ ಭಾಗವಹಿಸಿದರು. 

ಮಾಜಿ ಸಚಿವ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಸಂಭವನೀಯ ಅಭ್ಯರ್ಥಿ ಎಸ್‌.ಎ.ರವೀಂದ್ರನಾಥ್‌, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 18 ಮತ್ತು 19ನೇ ವಾರ್ಡ್‌ನ ವಿವಿಧ ಭಾಗದಲ್ಲಿ ಮುಷ್ಟಿ ಧಾನ್ಯ ಅಭಿಯಾನ ಪ್ರಚಾರ ಕೈಗೊಂಡರು. ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ ಇತರರು ಸಾಥ್‌ ನೀಡಿದರು. 

ಹರಿಹರ ಶಾಸಕ ಎಚ್‌.ಎಸ್‌. ಶಿವಶಂಕರ್‌ ಬೆಳಗ್ಗೆ ದೀಟೂರು, ಪಾಮೇನಹಳ್ಳಿನಲ್ಲಿ ಪ್ರಚಾರ ಕೈಗೊಂಡರು. ಸಂಜೆ ಹರಿಹರದ ವಿದ್ಯಾನಗರದಲ್ಲಿ ಪ್ರಚಾರ ಮುಂದುವರೆಸಿದರು. ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿ ಎಸ್‌. ರಾಮಪ್ಪ, ಬೆಳಗ್ಗೆ ಮಲೇಬೆನ್ನೂರು, ಕಡರನಾಯಕನಹಳ್ಳಿ, ಎಳೆಹೊಳೆಯ ನಂತರ ಸಂಜೆ ಹರಿಹರದ ಇಂದಿರಾನಗರದಲ್ಲಿ ಪ್ರಚಾರ ನಡೆಸಿದರು. 

ಜಗಳೂರು ಶಾಸಕ ಎಚ್‌.ಪಿ. ರಾಜೇಶ್‌ ಕೂಡ್ಲಿಗಿ ತಾಲೂಕಿನ ಗಾಣದಕಟ್ಟೆ ಗ್ರಾಮದ ಮಾಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಗಳೂರು ಕ್ಷೇತ್ರದ ಚಿಕ್ಕ ಉಜ್ಜನಿ ಗ್ರಾಮ, ಇತರೆಡೆ ಪ್ರಚಾರ ನಡೆಸಿದರು. ಬಿಜೆಪಿಯ ಸಂಭವನೀಯ ಅಭ್ಯರ್ಥಿ ಎಸ್‌.ವಿ. ರಾಮಚಂದ್ರಪ್ಪ ಜಗಳೂರು ನಿವಾಸದಲ್ಲಿ ಮುಖಂಡರು, ಇತರರೊಂದಿಗೆ ಚರ್ಚೆ ನಡೆಸಿದರು.

Advertisement

ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಜೆಡಿಎಸ್‌ನ ದೇವೇಂದ್ರಪ್ಪ ಕ್ಷೇತ್ರದ ವಿವಿಧ ಭಾಗದಲ್ಲಿ ಪ್ರಚಾರ ಕೈಗೊಂಡರು. ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಬೆಂಗಳೂರಿನಲ್ಲಿದ್ದಾರೆ. ಮಾಜಿ ಸಚಿವ ಜಿ. ಕರುಣಾಕರರೆಡ್ಡಿ ರಾಗಿಮಸಲವಾಡ, ಸಿಂಗ್ರಿಹಳ್ಳಿ, ಜಂಬುಲಿಂಗನಹಳ್ಳಿ, ಸತ್ತೂರು, ಅರೆಬಸಾಪುರ ಇತರೆಡೆ ಪ್ರಚಾರ ನಡೆಸಿದರು.

ಚನ್ನಗಿರಿ ಶಾಸಕ ವಡ್ನಾಳ್‌ ರಾಜಣ್ಣ ಚಿಕ್ಕಬ್ಬಿಗೆರೆ, ಮಾಜಿ ಶಾಸಕ, ಬಿಜೆಪಿಯ ಸಂಭವನೀಯ ಅಭ್ಯರ್ಥಿ ಮಾಡಾಳ್‌ ವಿರುಪಾಕ್ಷಪ್ಪ ಚನ್ನೇನಹಳ್ಳಿಯಲ್ಲಿ ಪ್ರಚಾರ ಮತ್ತು ಇತರೆ ಪಕ್ಷಗಳ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೆಡಿಎಸ್‌ನ ಹೊದಿಗೆರೆ ರಮೇಶ್‌ ಸುಣಿಗೆರೆ ಇತರೆಡೆ ಪ್ರಚಾರ ಕೈಗೊಂಡರು.

ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಕುಂಕುವ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಮಾಜಿ ಸಚಿವ ಎಂ. ಪಿ.ರೇಣುಕಾಚಾರ್ಯ ಕೋಣನತಲೆ ಗ್ರಾಮದಲ್ಲಿ ಮುಷ್ಟಿ ಅಕ್ಕಿ ಅಭಿಯಾನ ಮುಂದುವರೆಸಿದರು.

ಮಾಯಕೊಂಡ ಕ್ಷೇತ್ರದಲ್ಲಿ ಪ್ರಚಾರದ ಶಕೆ ಇನ್ನೂ ಪ್ರಾರಂಭವಾಗಿಯೇ ಇಲ್ಲ. ಶಾಸಕ ಕೆ. ಶಿವಮೂರ್ತಿ ಒಳಗೊಂಡಂತೆ ಅನೇಕರು ಬೆಂಗಳೂರಿನಲ್ಲಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ಹಾಲಿ ಶಾಸಕ ಕೆ.ಶಿವಮೂರ್ತಿ ಮತ್ತು ಮುಖ್ಯಮಂತ್ರಿಗಳ ಆಪ್ತ ಸಹಾಯಕ ಹೀರಾನಾಯ್ಕಗೆ ಟಿಕೆಟ್‌ ನೀಡದಂತೆ ಒತ್ತಾಯಿಸಿದರು. ಒಂದೊಮ್ಮೆ ನೀಡಿದರೂ ಕ್ಷೇತ್ರದೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಸ್ವಾಭಿಮಾನಿ ಕಾಂಗ್ರೆಸಿಗರು ಸಾಮೂಹಿಕವಾಗಿ ಕ್ರಾಂತಿಯ ಕಹಳೆ ಮೊಳಗಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next