ಕಾರವಾರ: ತಾಲೂಕಿನ ಅಮದಳ್ಳಿ ಬಳಿ ನೀರು ಸರಬರಾಜು ಪೈಪ್‌ಲೈನ್ ಹಾಳಾದ ಪರಿಣಾಮ ಕಾರವಾರ ಸೇರಿದಂತೆ ಬಿಣಗಾ, ಸೀಬರ್ಡ್ ನೌಕಾನೆಲೆ ವಸತಿ ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಿದವು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಐಆರ್‌ಬಿ ಕಂಪನಿ ಕಾಮಗಾರಿ ವೇಳೆ ನೀರಿನ ಪೈಪ್‌ಲೈನ್‌ಗೆ ಧಕ್ಕೆಯಾಗಿ ನೀರು ಸರಬರಾಜು ಸಂಪೂರ್ಣ ನಿಂತಿತ್ತು. ರಿಪೇರಿ ಕೈಗೊಂಡಾಗಲೇ ಎಡೆಬಿಡದೇ ಮಳೆ ಸುರಿದ ಪರಿಣಾಮ 15 ದಿನ ತಗುಲಿತು. ಐಆರ್‌ಬಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ ಸೇತುವೆ, ತಡೆಗೋಡೆಗಳು ಬರುವ ಪ್ರದೇಶಗಳಲ್ಲಿ ಹೊಸದಾಗಿ ಪೈಪ್‌ಲೈನ್ ಹಾಕಿಕೊಡಲು ಮುಂದಾಗಿದೆ.
ಕಳೆದ ಹತ್ತು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಶುಕ್ರವಾರ 8 ಮೀ. ಪೈಪ್‌ಲೈನ್ ಹಾಕುವ ಕಾಮಗಾರಿ ನಡೆಯುತ್ತಿದ್ದು, ಸಂಜೆ ವೇಳೆಗೆ ಕಾಮಗಾರಿ ಮುಗಿಯಲಿದೆ. ಕಾರವಾರದ ಜನತೆಗೆ ಶನಿವಾರ ಕುಡಿಯುವ ನೀರು ಲಭ್ಯವಾಗಲಿದೆ. ರವಿವಾರ ಗಂಗಾವಳಿ ನದಿಯ ಕುಡಿಯುವ ನೀರು ಸಿಗಲಿದೆ ಎಂದು ಪೌರಾಯುಕ್ತ ಎಸ್.ಯೋಗೇಶ್ವರ ತಿಳಿಸಿದ್ದಾರೆ.
ನೀರಿನ ಕರ ವಿನಾಯಿತಿಗೆ ಆಗ್ರಹ: ಕಳೆದ ಏಪ್ರಿಲ್, ಮೇ ನಲ್ಲಿ ಗಂಗಾವಳಿಯಲ್ಲಿ ನೀರು ಕೊರತೆ ಕಾರಣ ನಲ್ಲಿ ನೀರು ಸರಬರಾಜು ನಗರಸಭೆಗೆ ಸಾಧ್ಯವಾಗಿಲ್ಲ. ಮಾರ್ಚ್‌ನಿಂದಲೇ ದಿನ ಬಿಟ್ಟು ದಿನ ನೀರು ಕೊಡಲಾಯಿತು. ಏಪ್ರಿಲ್ನಲ್ಲಿ ವಾರಕ್ಕೊಮ್ಮೆ ನೀರು ಬಿಡಲಾಗಿತ್ತು. ಮೇ ನಲ್ಲಿ ಗಂಗಾವಳಿ ನದಿ ಬತ್ತಿದ ಕಾರಣ ಟ್ಯಾಂಕರ್‌ನಲ್ಲಿ ನೀರು ನೀಡಿದೆ. ಜೂನ್‌ನಲ್ಲಿ ಸಹ ದಿನ ಬಿಟ್ಟು ದಿನ ನೀರು ಪೂರೈಸಿದೆ. ಜುಲೈನಲ್ಲಿ 15 ದಿನ ಪೈಪ್‌ಲೈನ್ ಹಾಳಾದ ಕಾರಣ ಕುಡಿಯುವ ನೀರು ಬಿಟ್ಟಿಲ್ಲ. ಹಾಗಾಗಿ ನಗರಸಭೆ ಕುಡಿಯುವ ನೀರಿನ ಕರ ಸಂಗ್ರಹವನ್ನು ಮೂರು ತಿಂಗಳು ಮಾಡಬಾರದು. ಅಲ್ಲದೇ ದಿನ ಬಿಟ್ಟು ದಿನ ನೀರು ಕೊಡುವ ಕಾರಣ ನೀರಿನ ಕರ ಮಿನಿಮಮ್ 140 ರೂ.ಗಳ ಬದಲಾಗಿ ತಿಂಗಳಿಗೆ 70 ರೂ.ನಂತೆ ಆಕರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.