Advertisement

ಅನಧಿಕೃತ ವೃದ್ಧಾಶ್ರಮ ತೆರವಿಗೆ ಆಗ್ರಹ

12:43 PM May 19, 2022 | Team Udayavani |

ಸುರತ್ಕಲ್‌: ಇಲ್ಲಿನ ಕಡಂಬೋಡಿಯಲ್ಲಿ ವ್ಯಕ್ತಿಯೋರ್ವರು ಹಳೆ ದಾಖಲೆ ನೀಡಿ ವೃದ್ಧಾಶ್ರಮ ನಡೆಸುತ್ತಿದ್ದು, ಅವ್ಯವಸ್ಥೆಯಿಂದ ಕೂಡಿದೆ. ಮಾತ್ರವಲ್ಲ ನಿತ್ಯ ವಾಹ ನಗಳಲ್ಲಿ ಬಂದು ಕರ್ಕಶ ಹಾರ್ನ್ ಮಾಡಿಕೊಂಡು ಸ್ಥಳೀಯ ಹಿರಿಯ ನಾಗರಿಕರಿಗೆ ಶಾಂತಿ ಭಂಗ ಮಾಡಲಾಗುತ್ತಿದೆ. ಅಲ್ಲದೆ ಅಲ್ಲಿರುವ ವೃದ್ಧರನ್ನು ಸಮರ್ಪಕವಾಗಿ ಆರೈಕೆ ಮಾಡುವ ಬಗ್ಗೆ ನಮಗೆ ಸಂದೇಹವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು, ಸ್ಥಳೀಯ ಆಶ್ರಯ ವೇದಿಕೆ ಸಂಘಟನೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕ್ರಮ ಜರಗಿಸದ ಕಾರಣ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರಿಗೆ ದೂರು ನೀಡಿದ ಘಟನೆ ಬುಧವಾರ ಅಹವಾಲು ಸಭೆಯಲ್ಲಿ ನಡೆಯಿತು.

Advertisement

ಮಾಹಿತಿ ಪಡೆದ ಶಾಸಕರು ತತ್‌ ಕ್ಷಣ ಪೊಲೀಸರಿಗೆ ಕರೆ ಮಾಡಿ ಅನಧಿಕೃತವಾಗಿದ್ದಲ್ಲಿ, ಪೋರ್ಜರಿ ದಾಖಲೆ ಮಾಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಸರಕಾರದ ಇಲಾಖೆಯಿಂದಲೂ ತನಿಖೆ ಮಾಡಿಸುವ ಭರವಸೆ ನೀಡಿದರು. ಸುರತ್ಕಲ್‌ ಹೃದಯ ಭಾಗದಲ್ಲಿ ಬಿಲ್ಡರ್‌ ಓರ್ವರು ಭೂಮಿ ಸಮತಟ್ಟು ಮಾಡಿದ್ದು, ಇದರಿಂದ ಸ್ಥಳೀಯ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ. ಸರಿ ಪಡಿಸಿ ಎಂದು ಸ್ಥಳೀಯರು ಮನವಿ ಮಾಡಿದರು. ಹಿರಿಯ ನಾಗರಿಕರೋರ್ವರು ಮನೆಯಿಲ್ಲ ನಿವೇಶನ ಕೊಡಿ ಎಂದು ಅರ್ಜಿ ಹಿಡಿದುಕೊಂಡು ಶಾಸಕರಲ್ಲಿ ಭಿನ್ನವಿಸಿಕೊಂಡರು. ಆಶ್ರಯ ಮನೆ ಯೋಜನೆಯಡಿ ಬಿಪಿಎಲ್‌ ಪಡಿತರವಿದ್ದರೆ ವಸತಿ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಹೆದ್ದಾರಿಯಲ್ಲಿ ಅಸರ್ಪಕ ಚರಂಡಿಯಿಂದ ಮಳೆಗಾಲದಲ್ಲಿ ನೀರು ನುಗ್ಗುತ್ತಿದೆ ಎಂದು ಹೊಸಬೆಟ್ಟು ನಾಗರಿಕರ ನಿಯೋಗ ದೂರು ನೀಡಿದಾಗ ಶಾಸಕರು ಸ್ವತಃ ವೆಚ್ಚ ಭರಿಸಿ ಪೈಪ್‌ ಅಳವಡಿಸಲು ಮುಂದಾಗಿದ್ದು, ಪಾಲಿಕೆ ಸದಸ್ಯರಿಗೆ ಸೂಚನೆ ನೀಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಮಳೆಗಾಲದಲ್ಲಿ ತೊಂದರೆ ಉಂಟಾಗುವುದು ಸಾಮಾನ್ಯವಾದರೂ ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ಕ್ರಮ ಜರಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಈಗಾಗಲೇ ಮಳೆ ನೀರು ಹರಿಯುವ ತೋಡು, ರಾಜಕಾಲುವೆ ಸ್ವಚ್ಛತೆ ಮತ್ತಿತರ ತುರ್ತು ಕೆಲಸಗಳಾಗಿವೆ. ಪಾಲಿಕೆ ವತಿಯಿಂದ ವಿಶೇಷ ತಂಡ ರಚಿಸಿ ಮಳೆಗಾಲದಲ್ಲಿ ತುರ್ತು ಕಾರ್ಯ ನಿರ್ವಹಣೆಗೆ ಸೂಚಿಸಲಾಗುವುದು ಎಂದರು.

ಮನಪಾ ಸದಸ್ಯರಾದ ಲೋಕೇಶ್‌ ಬೊಳ್ಳಾಜೆ, ವೇದಾವತಿ, ಸರಿತಾ ಶಶಿಧರ್‌, ಶೊಭಾ ರಾಜೇಶ್‌, ಲಕ್ಷ್ಮೀ ಶೇಖರ್‌ ದೇವಾಡಿಗ, ನಯನಾ ಆರ್‌. ಕೋಟ್ಯಾನ್‌, ಮಾಜಿ ಮೇಯರ್‌ ಗಣೇಶ್‌ ಹೊಸಬೆಟ್ಟು, ವಿಠಲ ಸಾಲ್ಯಾನ್‌ ಮತ್ತಿತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next