Advertisement

ಬಾಕಿ ತೆರಿಗೆ ಹಣ ಸಂಗ್ರಹಕ್ಕೆ ಆಗ್ರಹ

09:21 PM Jan 28, 2020 | Lakshmi GovindaRaj |

ಮೈಸೂರು: ತೆರಿಗೆ ಹಣ ವಸೂಲಾತಿ ಮಾಡುವಲ್ಲಿ ಅಧಿಕಾರಿಗಳು ವಿಫ‌ಲವಾಗಿದ್ದು, ಪಾಲಿಕೆಯಲ್ಲಿ ಬಾಕಿ ಇರುವ ತೆರಿಗೆ ಹಣವನ್ನು ಸಂಪೂರ್ಣ ಸಂಗ್ರಹಿಸುವಂತೆ ಮಾಜಿ ಮೇಯರ್‌ಗಳು ಒತ್ತಾಯಿಸಿದರು.

Advertisement

ಮೇಯರ್‌ ತಸ್ನೀಂ ಅಧ್ಯಕ್ಷತೆಯಲ್ಲಿ ಮಂಗಳವಾರ ಪಾಲಿಕೆಯ ನವೀಕೃತ ಕೌನ್ಸಿಲ್‌ ಸಭಾಂಗಣದಲ್ಲಿ ನಗರ ಪಾಲಿಕೆಯ 2020- 21ನೇ ಸಾಲಿನ ಆಯವ್ಯಯದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆಯನ್ನು ಪಡೆಯಲು ನಡೆಸಿದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ತೆರಿಗೆ ಸಂಗ್ರಹ ಸಂಬಂಧ ಮಾಜಿ ಮೇಯರ್‌ಗಳು ಆಗ್ರಹಿಸಿದರು.

ತೆರಿಗೆ ವಸೂಲಿಗೆ ಸಿಬ್ಬಂದಿ ನೇಮಿಸಿ: ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್‌ ಬಿ.ಎಲ್‌. ಭೈರಪ್ಪ, ಪಾಲಿಕೆಗೆ ಸಂಗ್ರಹವಾಗಬೇಕಿದ್ದ ತೆರಿಗೆ ಹಣ ವಸೂಲಾತಿ ಮಾಡುವಲ್ಲಿ ಅಧಿಕಾರಿ ವರ್ಗ ವಿಫ‌ಲವಾಗಿದೆ. ಪಾಲಿಕೆ ವ್ಯಾಪ್ತಿಗೆ ಸೇರುವ ಅನೇಕ ಬಡಾವಣೆಗಳ ತೆರಿಗೆ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಇದರಿಂದ ನಗರವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಪಾಲಿಕೆಯ ತೆರಿಗೆ ಹಣ ಸಂಗ್ರಹಿಸಲೆಂದು ಮಾರ್ಚ್‌ನಿಂದ ಜಾರಿ ಮಾಡಲು ಹೊರಟಿರುವ ಆನ್‌ಲೈನ್‌ ವ್ಯವಸ್ಥೆಯಲ್ಲಿ ಪಾಲಿಕೆ ವತಿಯಿಂದ ಸಿಬ್ಬಂದಿ ನೇಮಿಸಿ ತೆರಿಗೆ ವಸೂಲಿ ಮಾಡಿದರೆ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದರು.

ಹಣ ನಿರ್ವಹಣೆ: ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಮಾತನಾಡಿ, ಬಜೆಟ್‌ ಮಂಡಿಸುವಾಗ ಕೊಡುವ ಪ್ರಾಮುಖ್ಯತೆಯಷ್ಟೇ ಹಣ ಖರ್ಚು ಮಾಡುವಾಗಲೂ ಅಷ್ಟೇ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಕಳೆದ 5 ವರ್ಷಗಳಿಂದಲೂ ಪಾಲಿಕೆ ಆದಾಯ ಇದ್ದಷ್ಟಯೇ ಇದ್ದು, ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಹೇಳಿದರು.

Advertisement

ಜಾರಿಯಾಗದ ಯೋಜನೆ ಬೇಡ: ಮಾಜಿ ಮೇಯರ್‌ ಆರ್‌.ಲಿಂಗಪ್ಪ ಮಾತನಾಡಿ, ಬಜೆಟ್‌ನಲ್ಲಿ ನಿರ್ಧರಿಸಿದ ಅನೇಕ ಯೋಜನೆಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಆದ್ದರಿಂದ ಪಾಲಿಕೆಯ ಆದಾಯಕ್ಕೆ ತಕ್ಕಂತೆ ಸೀಮಿತವಾದ ಬಜೆಟ್‌ ಮಂಡಿಸುವುದು ಒಳಿತು. ಅಲ್ಲದೇ ಕಾರ್ಯರೂಪಕ್ಕೆ ಬಾರದ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಬಾರದು ಎಂದು ತಿಳಿಸಿದರು.

ಮಹಿಳಾ ಸಬಲೀಕರಣ: ಮಾಜಿ ಉಪ ಮೇಯಪ್‌ ಪುಷ್ಪವಲ್ಲಿ ಮಾತನಾಡಿ, ಪಾಲಿಕೆ ವತಿಯಿಂದ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಬಜೆಟ್‌ ಮಂಡಿಸುವಾಗ ಮಹಿಳೆಯರಿಗೆ ಪೂರಕವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಮೇಯರ್‌ ತಸ್ನೀಂ, ಉಪ ಮೇಯರ್‌ ಸಿ. ಶ್ರೀಧರ್‌, ಆಯುಕ್ತ ಗುರುದತ್‌ ಹೆಗಡೆ, ಮಾಜಿ ಮೇಯರ್‌ಗಳಾದ ದಕ್ಷಿಣಮೂರ್ತಿ, ಎಚ್‌.ಎನ್‌. ಶ್ರೀಕಂಠಯ್ಯ, ಭಾಗ್ಯವತಿ, ಪುಷ್ಪಲತಾ ಜಗನ್ನಾಥ್‌, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್‌, ಪಾಲಿಕೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್‌. ಚಂದ್ರಶೇಖರಯ್ಯ ಮೊದಲಾದವರು ಇದ್ದರು.

ತಡವಾಗಿ ಆಗಮಿಸಿದ ಮೇಯರ್‌: ಪಾಲಿಕೆಯ 2020- 21ನೇ ಸಾಲಿನ ಬಜೆಟ್‌ ಮಂಗಳವಾರ ನಡೆದ ಸಾರ್ವಜನಿಕ ಸಮಾಲೋಚನಾ ಸಭೆಗೆ ಮೇಯರ್‌ ತಸ್ನೀಂ 40 ನಿಮಿಷ ತಡವಾಗಿ ಆಗಮಿಸಿದರು. ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಸಹ ಸಭೆ ಆರಂಭವಾದ ಬಳಿಕವಷ್ಟೇ ಸಭಾಂಗಣಕ್ಕೆ ಆಗಮಿಸಿದರು.

ಇದರಿಂದ ಮಾಜಿ ಮೇಯರ್‌ಗಳು ಹಾಗೂ ಸಾರ್ವಜನಕರು ಕಾಯ್ದು ಕುಳಿತುಕೊಳ್ಳುವಂತಾಯಿತು. ಇನ್ನೂ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರ ಬದಲು ಮಾಜಿ ಮೇಯರ್‌ಗಳು, ಉಪ ಮೇಯರ್‌ಗಳು, ಗುತ್ತಿಗೆದಾರರು ಮಾತ್ರ ಭಾಗವಹಿಸಿದ್ದರು.

ಬೆಳೆಯುತ್ತಿದೆ ನಗರ, ಕ್ಷೀಣಿಸುತ್ತಿದೆ ಆದಾಯ: ಮಾಜಿ ಮೇಯರ್‌ ಪುರುಷೋತ್ತಮ್‌ ಮಾತನಾಡಿ, ನಗರದಲ್ಲಿ ಸಾವಿರಾರು ಮಳಿಗೆಗಳಿದ್ದು, ಯಾರೂ ಸಕಾಲಕ್ಕೆ ತೆರಿಗೆಯನ್ನು ಪಾವತಿಸುತ್ತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿರುವ ಬಡಾವಣೆಯ ನಿವಾಸಿಗಳು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತೆರಿಗೆ ಪಾವತಿಸುತ್ತಿದ್ದಾರೆ.

ಈ ಬಗ್ಗೆ ಆಯುಕ್ತರು ಕ್ರಮ ವಹಿಸಬೇಕು. ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಆದಾಯ ಮಾತ್ರ ಕುಂಠಿತವಾಗುತ್ತಿದೆ. ಪಾಲಿಕೆಯ ನೀರಿನ ತೆರಿಗೆ ಹಣವೇ ಕೋಟ್ಯಂತರ ರೂಪಾಯಿ ಬಾಕಿ ಇದ್ದು, ಹಣವನ್ನು ಕಡ್ಡಾಯವಾಗಿ ಪಾವತಿ ಮಾಡುವಂತೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next