ಮುದ್ದೇಬಿಹಾಳ: ತಾಲೂಕಿನ ಮುದ್ನಾಳ ಗ್ರಾಮದ ಕೆರೆಯನ್ನು ಒಳಚರಂಡಿ ಡ್ರೈನೇಜ್‌ಗೆ ಬಳಕೆ ಮಾಡದಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥರು ಹಾಗೂ ರೈತರ ದನಕರುಗಳಿಗೆ ಉಪಯುಕ್ತವಾಗುವ ಕೆರೆ ಒಳಚರಂಡಿಯ ಡ್ರೈನೇಜ್‌ಗೆ ಬಳಸುವ ಹುನ್ನಾರ ನಡೆದಿದೆ. ಇದನ್ನು ನಿಲ್ಲಿಸಿ ಕೆರೆ ರಕ್ಷಿಸುವಂತೆ ಆಗ್ರಹಿಸಿದರು.
ಸುಮಾರು 6 ಸಾವಿರ ಸಂಖ್ಯೆಯುಳ್ಳ ಮುದ್ನಾಳ ಗ್ರಾಮಕ್ಕೆ ಕೆರೆ ಉಪಯುಕ್ತವಾಗಿದೆ. ಮುದ್ದೇಬಿಹಾಳ ಪಟ್ಟಣದಲ್ಲಿ ಕಳೆದ ವರ್ಷದಿಂದ ಆರಂಭಗೊಂಡಿರುವ ಒಳ ಚರಂಡಿಯ ಡ್ರೈನೇಜ್‌ಗಾಗಿ ಮುದ್ನಾಳ ಕೆರೆ ಉಪಯೋಗಿಸಲು ಮುಂದಾಗಿದ್ದು, ಕೆರೆಯಲ್ಲಿ ಸಂಗ್ರಹಣೆಗೊಂಡ ನೀರನ್ನು ಗುತ್ತಿಗೆದಾರರು ಹೊರಹಾಕುತ್ತಿದ್ದಾರೆ. ಕೆರೆಯಲ್ಲಿ ನೀರು ಇಲ್ಲದಿದ್ದರೆ ದನ ಕರುಗಳಿಗೆ ನೀರು ಇಲ್ಲದಂತಾಗುತ್ತದೆ. ಈ ಕುರಿತು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿ ಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತರು, ಮುದ್ನಾಳ ಕೆರೆಯನ್ನು ಮುಚ್ಚಿ ಡ್ರೈನೇಜ್ ಮಾಡುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜಿಲ್ಲಾದ್ಯಂತ ಕೆರೆ ತುಂಬುವ
ಯೋಜನೆ ಜಾರಿ ಮಾಡುತ್ತಿದ್ದಾರೆ. ಆದರೆ, ಮುದ್ದೇಬಿಹಾಳ ತಾಲೂಕಿನಲ್ಲಿ ಕೆರೆ ಮುಚ್ಚುವ ಕೆಲಸ ಮಾಡಲಾಗುತ್ತಿದ್ದು, ವಿಪರ್ಯಾಸದ ಸಂಗತಿ. ಇದನ್ನು ನಿಲ್ಲಿಸಿ ರೈತರಿಗೆ ಅನುಕೂಲ
ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ರಸ್ತೆಗಿಳಿದು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದರು.
ಸಂಗನಗೌಡ ಪಾಟೀಲ, ಎಪಿಎಂಸಿ ಸದಸ್ಯ ಬಿ.ಆರ್. ಯರಝರಿ, ಅಬ್ದುಲ ಮೊಕಾಶಿ, ಎಂ.ಎಸ್. ದೋರನಹಳ್ಳಿ, ಲೋಕನಾಥ ಲಮಾಣಿ, ಎಸ್.ಜೆ. ವಾಲಿಕಾರ, ಹಣಮಂತ ಅಮರಗೋಳ, ಪಿ.ಯು. ವಾಲಿಕಾರ, ಸಿದ್ದಣ್ಣ ದೋತಿಹಾಳ, ರಾಮಣ್ಣ ಹುಣಸಗಿ ಸೇರಿದಂತೆ ಇತರರಿದ್ದರು.