ಆಲಮೇಲ: ಪಟ್ಟಣದ ಬಸವ ನಗರ ಮತ್ತು ಗಣೇಶ ನಗರದ ಮೂಲಕ ರುಕುಂಪುರ ರಸ್ತೆ ಅತಿಕ್ರಮಣಗೊಂಡಿದ್ದು ಅವುಗಳು ತೆರವುಗೊಳಿಸಿ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಸೋಮವಾರ ಸಾರ್ವಜನಿಕರು ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪಪಂ ಸದಸ್ಯ ಸಂಜುಕುಮಾರ ಎಂಟಮಾನ ಮಾತನಾಡಿ, ಬಸವ ನಗರ ಮತ್ತು ಗಣೇಶ ನಗರಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಅಂಗಡಿಗಳು ಅನ ಧಿಕೃತವಾಗಿ ಇಟ್ಟಿದ್ದು ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿಗಳು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬಸವ ನಗರಕ್ಕೆ ಹೋಗುವ ರಸ್ತೆಯ ಒಂದು ಬದಿ ಅಂಜುಮನ್ ಕಾಂಪ್ಲೇಕ್ಸ ಇದ್ದು ಅದರ ಪಕ್ಕದಲ್ಲಿ ಅನಧಿಕೃತವಾಗಿ ಡಬ್ಟಾ ಮತ್ತು ಕಟ್ಟಡದ ಅಂಗಡಿಗಳನ್ನು ಇಟ್ಟಿರುತ್ತಾರೆ. ಅದರಂತೆ ಇದೇ ರಸ್ತೆಗೆ ನಮ್ಮೂರಿನ ಪವಿತ್ರ ಗ್ರಾಮ ದೇವರ ಪೀರ ಗಾಲೀಬಸಾಬ ದರ್ಗಾವಿದು ಜಾತ್ರೆಯ ಸಮಯದಲ್ಲಿ ಬರುವ ಭಕ್ತಾ ದಿಗಳಿಗೆ ದೇವಸ್ಥಾನಕ್ಕೂ ಹೋಗಿ ಬರುವ ರಸ್ತೆಯ ಅನಾನುಕೂಲವಿದೆ. ಇದೆಲ್ಲವನ್ನು ಅರಿತುಕೊಂಡು ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನುವು ಮಾಡಿಕೊಬೇಕು ಎಂದು ವಿನಂತಿಸಿದರು.
ರಸ್ತೆ ವಿಷಯದ ಬಗ್ಗೆ 2019ರಲ್ಲೆ ಪಟ್ಟಣ ಪಂಚಾಯಿತಿಗೆ ಮನವಿ ನೀಡಿದ್ದು ಇನ್ನುವರೆಗೂ ಯಾವುದೆ ತೆರವು ಕಾರ್ಯ ಮಾಡಿಲ್ಲ. ಇನ್ನು ಒಂದು ವಾರ ಕಾಲಾವಕಾಶ ನೀಡಲಾಗುವುದು. ಅಲ್ಲಿವರೆಗೂ ಅತಿಕ್ರಮಣ ತೆರವುಗೊಳಿಸದಿದ್ದರೆ ಬಸವ ನಗರ ಮತ್ತು ಗಣೇಶ ನಗರ ಹಾಗೂ ಗ್ರಾಮಸ್ಥರೊಂದಿಗೆ ಪಪಂಗೆ ಬೀಗ ಜಡಿದು ಪ್ರತಿಭಟಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಪಪಂ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ ಮನವಿ ಸ್ವೀಕರಿಸಿ ಮಾತನಾಡಿ, ಈ ವಿಷಯದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಪಪಂ ಸದಸ್ಯರಾದ ಚಂದು ಹಳೆಮನಿ, ಗ್ರಾಮಸ್ಥರಾದ ಖಂಡು ಸೊಲಂಕರ, ಪ್ರದೀಪ ವಾವರೆ, ನಿಂಬೋಜಿ ಚೋರಮಲ್ಲೆ, ಅಬ್ದುಲ್ ಸೇರಿದಂತೆ ಮುಂತಾದವರು ಇದ್ದರು.