ಬಂಟ್ವಾಳ: ಅಮ್ಮುಂಜೆ ಗ್ರಾಮದ ಕಲಾಯಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿಠಲ ರೈ ಅವರು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರಿಗೆ ಮನವಿ ಸಲ್ಲಿಸಿದ್ದಾರೆ. ಸುಮಾರು ಹದಿನೈದು ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಜಮೀನು ಬಿಟ್ಟುಕೊಟ್ಟಿದ್ದು, ಈವರೆಗೂ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 11 ಕಿ.ಮೀ. ದೂರ ಇರುವ ಕಲಾಯಿ ರಸ್ತೆಯಲ್ಲಿ ಅಂದಾಜು 200 ಮನೆಗಳು, ಅಂಗನವಾಡಿ ಕೇಂದ್ರ, ಧಾರ್ಮಿಕ ಕೇಂದ್ರಗಳು ಇವೆ. ಈಗಿರುವ ಕಚ್ಚಾ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದಿದ್ದಾರೆ.
ತತ್ ಕ್ಷಣ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದು, ರಸ್ತೆ ಅಭಿವೃದ್ಧಿಪಡಿಸಲು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಆದೇಶಿಸಿದ್ದರು. ಬಳಿಕ ಮಂಜೂರಾದ ಅನುದಾನದಲ್ಲಿ ಇಲ್ಲಿನ ಕೆಲ ಪಂಚಾಯತ್ ಸದಸ್ಯರು ಕೇವಲ 20 ಮೀಟರ್ ರಸ್ತೆಯನ್ನು ಮಾತ್ರ ಕಾಂಕ್ರಿಟೀಕರಣಗೊಳಿಸಿ, ಉಳಿದ ಅನುದಾನವನ್ನು ಬೇರೆಡೆ ವರ್ಗಾಯಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.