ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆಗಳ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬೆಂಬಲವಾಗಿ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ದೆಹಲಿ ಹೋರಾಟದ ರೂವಾರಿ ರಾಕೇಶ್ ಟಿಕಾಯತ್ ವಿರುದ್ಧ ದಾಖಲಾಗಿರುವ ಮೊಕದ್ದಮೆ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಮೂರು ಕೃಷಿ ಸಂಬಂಧಿತ ಕಾನೂನುಗಳನ್ನು ರದ್ದು ಮಾಡಬೇಕು. ವಿದ್ಯುತ್ ಮಸೂದೆ-2020 ನ್ನು ವಾಪಸು ಪಡೆಯಬೇಕು ಹಾಗು ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ|ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾನೂನನ್ನು ರಚಿಸಬೇಕು ಎಂದು ಒತ್ತಾಯಿಸಿ ಕಳೆದ ನಾಲ್ಕು ತಿಂಗಳನಿಂದ ಶಾಂತಿಯುತವಾಗಿ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ಲಕ್ಷಾಂತರ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯ, ದಬ್ಟಾಳಿಕೆ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಚಾರಿತ್ರಿಕ ರೈತ ಹೋರಾಟದ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕಾದ ಕೇಂದ್ರ ಸರ್ಕಾರ ಆರಂಭದಿಂದಲೂ ಹೋರಾಟ ನಡೆಸುತ್ತಿರುವವರು ರೈತರೇ ಅಲ್ಲ.ರೈತರ ಜೊತೆಗೆ ಭಯೋತ್ಪಾದಕರು ಸೇರಿಕೊಂಡಿದ್ದಾರೆ.
ಚೀನಾ, ಪಾಕಿಸ್ತಾನಿ ಏಜೆಂಟರು ಇತ್ಯಾದಿ ಅಪಪ್ರಚಾರ ಮಾಡಲಾಗುತ್ತಿದೆ. ರೈತ ಚಳವಳಿಯನ್ನು ದುರ್ಬಲಗೊಳಿಸಲು ಸಾಧ್ಯವಾಗದೇ ಹತಾಶೆಯಿಂದ ಕೇಂದ್ರ ಸರ್ಕಾರ ಈಗ ಕಳೆದ ಒಂದು ತಿಂಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ಲಕ್ಷಾಂತರ ರೈತರು ಉಳಿದಿರುವ ಕಡೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಕಡಿತ, ಇಂಟರ್‌ನೆಟ್ ಸೇವೆ ಸ್ಥಗಿತ, ಹೋರಾಟದ ಕೇಂದ್ರಗಳನ್ನು ಬಯಲು ಬಂಧಿಖಾನೆಗಳಾಗಿ ಪರಿವರ್ತಿಸುತ್ತಿದ್ದಾರೆ. ಈ ಎಲ್ಲಾ ಕ್ರಮಗಳು ಅತ್ಯಂತ ಪ್ರಜಾಪ್ರಭುತ್ವ ವಿರೋಧಿ, ಅನಾಗರೀಕ ಧೋರಣೆ, ಫ್ಯಾಸಿಸ್ಟ್ ಕ್ರಮಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಸದಸ್ಯ ತೇಜಸ್ವಿ ಪಟೇಲ್, ನ್ಯಾಯವಾದಿ ಅನೀಸ್ ಪಾಷಾ, ಸುನೀತ್ ಕುಮಾರ್, ತಿಪ್ಪೇಸ್ವಾಮಿ ಅಣಬೇರು, ಸತೀಶ್ ಅರವಿಂದ್, ಆದಿಲ್‌ಖಾನ್ ಇತರರು ಇದ್ದರು.