Advertisement
ದಕ್ಷಿಣ ಕೊಡಗು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ತೋಟಗಳ ಲೈನ್ ಮನೆಗಳಲ್ಲಿ ನೆಲೆಸಿರುವ ಆದಿವಾಸಿಗಳು, ನಿವೇಶನ ಮತ್ತು ಹಕ್ಕುಪತ್ರಕ್ಕಾಗಿ ನಿರಂತರವಾಗಿ ಅರ್ಜಿ ಸಲ್ಲಿಸುತ್ತಲೇ ಬಂದಿದ್ದಾರೆ. ಮೊದಲ ಹಂತದಲ್ಲಿ 150 ಕುಟುಂಬಗಳಿಗೆ ಶಾಶ್ವತ ನೆಲೆ ಒದಗಿಸಬೇಕು ಮತ್ತು 3 ಸಾವಿರಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳ ಬದುಕಿಗೆ ನೆಲೆಯೊದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರಣಿ ಆರಂಭಿಸಿರುವುದಾಗಿ ಬುಡಕಟ್ಟು ಕಾರ್ಮಿಕರ ಸಂಘದ ಕಾರ್ಯದರ್ಶಿ ಶೈಲೇಂದ್ರ ಕುಮಾರ್ ತಿಳಿಸಿದರು. ಐಟಿಡಿಸಿ ಅಧಿಕಾರಿಗಳು ಪ್ರತಿಭಟನಾಕಾರರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ, ಆದಿವಾಸಿಗಳಿಗೆ ನಿವೇಶನ ಮತ್ತು ಹಕ್ಕು ಪತ್ರ ಒದಗಿಸುವುದು ನಮ್ಮ ವ್ಯಾಪ್ತಿಗೆ ಬರುವಂತಹದ್ದಲ್ಲ ಎಂದು ದರ್ಪದ ಉತ್ತರ ನೀಡಿದ್ದಾರೆ. ಅಲ್ಲದೆ ಸ್ಥಳದಿಂದ ತೆರಳುವಂತೆ ಬೆದರಿಸಿರುವುದಾಗಿ ಬುಡಕಟ್ಟು ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಉಷಾ ಹಳ್ಳಿಗಟ್ಟು, ಲಲಿತಾ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
Related Articles
Advertisement
ಪ್ರತಿಭಟನೆಯ ಸಂದರ್ಭದಲ್ಲೇ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಂಘದ ಸಂಚಾಲಕ ಜಿ.ಬಿ.ಗಪ್ಪು, ಜೇನು ಕುರುಬರ ಮಹಿಳಾ ಅಧ್ಯಕ್ಷೆ ಜಾನಕಮ್ಮ, ಲಲಿತಾ, ಉಷಾ ಹಾಗೂ ಉಡುಪಿ ಕೊರವ ಸಮುದಾಯದ ಪ್ರತಿನಿಧಿ ಸುಶೀಲಾ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಭರವಸೆಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಆದಿವಾಸಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಈಗಾಗಲೆ ನಿವೇಶನ ರಹಿತ ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಕುಟುಂಬಗಳ ಸಮೀಕ್ಷೆ ನಡೆಯುತ್ತಿದೆ. ಗ್ರಾಮ ಪಂಚಾಯ್ತಿಗಳಿಗೂ ಸರ್ವೇ ನಡೆಸಲು ಸೂಚನೆ ನೀಡಲಾಗಿದ್ದು, ಈ ಪ್ರಕ್ರಿಯೆಗೆ ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ. ಮುಂದಿನ ಎರಡು ತಿಂಗಳ ಒಳಗೆ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹದಿಂದ ತಾತ್ಕಾಲಿಕವಾಗಿ ಹಿಂದೆ ಸರಿದ ಪ್ರತಿಭಟನಾಕಾರರು ಭರವಸೆ ಈಡೇರದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.