Advertisement

ಖಾಸಗಿ ಬಸ್‌ ನಿಯಂತ್ರಣಕ್ಕೆ ಆಗ್ರಹ

09:16 AM Jul 26, 2019 | Team Udayavani |

ಕೋಲಾರ: ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಟಿಪ್ಪರ್‌ ಹಾಗೂ ಖಾಸಗಿ ಬಸ್‌ಗಳ ಹಾವಳಿಗೆ ಕಡಿವಾಣ ಹಾಕಿ, ಹೆಜ್ಜೆ ಹೆಜ್ಜೆಗೂ ಜನ ಸಾಮಾನ್ಯರನ್ನು ಶೋಷಣೆ ಮಾಡುವ ಇಲಾಖೆ ಯಲ್ಲಿನ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ರೈತ ಸಂಘ ಆರ್‌.ಟಿ.ಒ ಕಚೇರಿ ಮುಂದೆ ಹೋರಾಟ ಮಾಡಿ, ಸೂಪರಿಡೆಂಟ್ ಭೀಮಯ್ಯಗೆ ಮನವಿ ನೀಡಿ ಆಗ್ರಹಿಸಿತು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಆರ್‌.ಟಿ.ಒ ಇಲಾಖೆ ಇಂದು ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ. ಹಣ ಕೊಟ್ಟರೆ ಯಾವುದೇ ವಾಹನಕ್ಕೂ ಗುಣಮಟ್ಟದ ಪರೀಶಿಲನಾ ಪತ್ರ ನೀಡುವ ಅಧಿಕಾರಿಗಳು ಸಮರ್ಪಕವಾಗಿ ವಾಹನವನ್ನು ಪರಿಶೀಲನೆ ಮಾಡುವ ಶ್ರಮ ತೆಗೆದುಕೊಳ್ಳುವುದಿಲ್ಲ ಎಂದರು.

ಕ್ರಮವಿಲ್ಲ: ದಲ್ಲಾಳಿಗಳು ಮತ್ತು ಇಲಾಖೆಯಲ್ಲಿನ ಕೆಳ ಹಂತದ ಅಧಿಕಾರಿಗಳ ಮಾತೇ ವೇದವಾಕ್ಯವಾಗಿದೆ. ಅಧಿಕಾರಿಗಳಿಗೆ ಹಾಗೂ ದಲ್ಲಾಳಿಗಳಿಗೆ ಹಣದಾಟ ಜನಸಾಮಾನ್ಯರಿಗೆ ಪ್ರಾಣ ಸಂಕಟವಾಗಿದೆ. ಇನ್ನೂ ನೂರಾರು ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಖಾಸಗಿ ಬಸ್‌ಗಳು ಮತ್ತು ಟಿಪ್ಪರ್‌ ಹಾವಳಿಯಿಂದ ಜನಸಾಮಾನ್ಯರನ್ನು ರಕ್ಷಣೆ ಮಾಡುವಲ್ಲಿ ಆರ್‌. ಟಿ.ಒ ಅಧಿಕಾರಿಗಳು ವಿಫ‌ಲವಾಗಿದ್ದಾರೆ ಎಂದರು.

ಅಮಾಯಕರು ಬಲಿ: ಜಿಲ್ಲಾದ್ಯಂತ ಟೇಕಲ್, ಲಕ್ಕೂರು, ಮಾಲೂರು, ನರಸಾಪುರ, ವೇಮಗಲ್, ಮತ್ತಿತರ ಅತಿ ಹೆಚ್ಚು ಜಲ್ಲಿ ಕ್ರಷರ್‌ಗಳಿರುವ ಸ್ಥಳಗಳಲ್ಲಿ ಜನರ ಕಣ್ಣು ಮುಂದೆಯೇ ಹಾಡು ಹಗಲೇ ಅಮಾಯಕ ಜನರು ಟಿಪ್ಪರ್‌ ಲಾರಿಗಳ ವೇಗ ಹಾಗೂ ಹೆಚ್ಚಿನ ಟನ್ನೇಜ್‌ ಹಾಕಿಕೊಂಡು ಸಮರ್ಪಕವಾದ ಪರವಾನಗಿ ಇಲ್ಲದ ಚಾಲಕರ ಬೇಜವಾಬ್ದಾರಿಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದರು.

ಸರ್ಕಾರದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆಗಳನ್ನು ಅಭಿವೃದ್ಧಿ ಮಾಡಿದರೆ ಆ ರಸ್ತೆಗಳು ಟಿಪ್ಪರ್‌ ಲಾರಿಗಳ ಹಾವಳಿಗೆ ಮೂರೇ ದಿನಕ್ಕೆ ಸಂಪೂರ್ಣವಾಗಿ ಹದಗೆಡುತ್ತಿವೆ. ಇಷ್ಟೆಲ್ಲಾ ಅವ್ಯವಸ್ಥೆ ಕಣ್ಮುಂದೆ ಇದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ತಾಲೂಕಾಧ್ಯಕ್ಷ ಈಕಂಬಳ್ಳಿ ಮಂಜುನಾಥ್‌ ಮಾತನಾಡಿ, ಇಲಾಖೆಯೆಂಬುದು ಶ್ರೀಮಂತರಿಗೆ ಅಡವಿಟ್ಟು, ಬಡವರಿಗೆ ಮುಳ್ಳಿನ ಹಾದಿಯಾಗಿದೆ. ಅದೇ ಒಬ್ಬ ಜನಸಾಮಾನ್ಯ ತಪ್ಪು ಮಾಡಿದರೆ ಅವರ ಮೇಲೆ ಕಾನೂನು ಎಂಬ ಬ್ರಹ್ಮಾಸ್ತ್ರ ಎತ್ತುವ ಅಧಿಕಾರಿಗಳು ದೊಡ್ಡ ದೊಡ್ಡ ಶ್ರೀಮಂತರು ತಪ್ಪು ಮಾಡಿದರೆ ಅದನ್ನು ಸರಿಪಡಿಸಿಕೊಳ್ಳಲು ಇವರೇ ತುದಿಗಾಲಲ್ಲಿ ನಿಂತು ಅವರ ಮನೆ ಬಾಗಿಲಿಗೆ ಕಚೇರಿಯನ್ನು ತೆಗೆದುಕೊಂಡು ಹೋಗುತ್ತಾರೆ ಎಂದರು.

ಮನವಿ ಸ್ವೀಕರಿಸಿದ ಸೂಪರ್‌ಡೆಂಟ್ ಬೀಮಯ್ಯ ಮಾತನಾಡಿ, ಕಚೇರಿಯಲ್ಲಿ ಅವ್ಯವಸ್ಥೆ ಹಾಗೂ ದಲ್ಲಾಳಿಗಳ ಹಾವಳಿಯ ಬಗ್ಗೆ ಸಾರ್ವಜನಿಕರ ದೂರುಗಳು ಹೆಚ್ಚಾಗಿವೆ, ಜೊತೆಗೆ ಅಮಾಯಕ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಖಾಸಗಿ ಬಸ್‌ ಮತ್ತು ಟಿಪ್ಪರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಹೋದರೆ ರಾಜಕೀಯ ಒತ್ತಡಗಳು ಹೆಚ್ಚಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next