ಕೋವಿಡ್ 19 ಲಾಕ್ ಡೌನ್ ನಿಂದಾಗಿ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಚಿತ್ರದ ಚಿತ್ರೀಕರಣ, ಪ್ರಚಾರ, ಪ್ರದರ್ಶನ ಸೇರಿದಂತೆ ಎಲ್ಲ ಚಟುವಟಿಗೆಗಳು ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ಚಿತ್ರರಂಗವನ್ನೆ ಆಶ್ರಯಿಸಿಕೊಂಡು ಬದುಕು ಕಟ್ಟಿಕೊಂಡಿರುವ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸೇರಿದಂತೆ ಸಾವಿರಾರು ಕುಟುಂಬಗಳಲ್ಲಿ ಆತಂಕದ ಛಾಯೆ ಮನೆ ಮಾಡಿದೆ.
ಸದ್ಯ ಸರ್ಕಾರ ಲಾಕ್ ಡೌನ್ ನಿಯಮಗಳನ್ನು ಸಡಿಲಿಸದ್ದು ಮುಂದಾಗಿದ್ದು, ಧಾರಾವಾಹಿಗಳ ಚಿತ್ರೀಕರಣಕ್ಕೆ ಷರತ್ತುಬದ್ದ ಅನುಮತಿ ನೀಡಿದೆ. ಇದೇ ವೇಳೆ ಸಿನಿಮಾಗಳ ಶೂಟಿಂಗ್‌ಗಳಿಗೂ ಅನುಮತಿ ನೀಡುವಂತೆ ಚಿತ್ರರಂಗ ಸರ್ಕಾರದ ಮುಂದೆ
ಮನವಿಯನ್ನಿಟ್ಟಿದೆ. ಈ ಸಂಬಂಧ ಬುಧವಾರ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿದ ಚಿತ್ರರಂಗದ ಪ್ರಮುಖರು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿರುವಂತೆಯೇ, ಚಲನಚಿತ್ರಗಳ ಚಿತ್ರೀಕರಣಕ್ಕೂ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಸಚಿವ ಆರ್. ಅಶೋಕ್, ಈ ವಿಷಯವನ್ನು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸಾಧ್ಯಸಾಧ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಚಿತ್ರೀಕರಣಕ್ಕೆ ಅವಕಾಶ ನೀಡಲು ಪ್ರಯತ್ನಿಸಲಾಗುವುದು. ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ತಮ್ಮನ್ನು ಭೇಟಿ ಮಾಡಿದ ಚಿತ್ರರಂಗದ ಪ್ರಮುಖರಿಗೆ ಭರವಸೆಯನ್ನು ನೀಡಿದ್ದಾರೆ.
ಇನ್ನು, ಚಿತ್ರರಂಗದ ಮೇಲೂ ಕೋವಿಡ್ 19 ಎಫೆಕ್ಟ್ ಜೋರಾಗಿಯೇ ತಟ್ಟುತ್ತಿದೆ. ಯಾವಾಗಲೂ ಮುಹೂರ್ತ, ಶೂಟಿಂಗ್, ಪಬ್ಲಿಸಿಟಿ, ಪ್ರಮೋಶನ್, ರಿಲೀಸ್, ಸಕ್ಸಸ್ ಸೆಲೆಬ್ರೇಶನ್ ಅಂಥ ರಂಗುರಂಗಾಗಿ ಕಳೆಕಟ್ಟಿರುತ್ತಿದ್ದ ಚಿತ್ರರಂಗ, ಸದ್ಯಕ್ಕೆ ಅದ್ಯಾವುದೂ ಇಲ್ಲದೆ ಕಂಪ್ಲೀಟ್ ಲಾಕ್ ಡೌನ್ ಆಗಿ ಬಣಗುಡುತ್ತಿದೆ. ಮತ್ತೂಂದೆಡೆ, ಈಗಾಗಲೇ ಅಧಂಬರ್ಧ ಶೂಟಿಂಗ್ ಮಾಡಿರುವ ಚಿತ್ರತಂಡಗಳು ಇನ್ನುಳಿದ ಚಿತ್ರೀಕರಣ ಹೇಗೆ ಮಾಡೋದು, ಯಾವಾಗ ಮಾಡೋದು ಅನ್ನೋ ಚಿಂತೆಯಲ್ಲಿವೆ. ಹಾಗಾಗಿ ಸಿನಿಮಾ ನಿಯೋಗ ಚಿತ್ರೀಕರಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದೆ.
ಇನ್ನು ಆರ್. ಅಶೋಕ್ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಿರ್ಮಾಪಕ ಕೆ. ಮಂಜು, ಚಲನಚಿತ್ರ ಕಾರ್ಮಿಕ ಒಕ್ಕೂಟದ ಕಾರ್ಯದರ್ಶಿ ರವೀಂದ್ರನಾಥ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಹಾಜರಿದ್ದರು.