Advertisement

ಕರ್ನಾಟಕ ಪಬ್ಲಿಕ್‌ ಸ್ಕೂಲ್ಗೆ ಆಗ್ರಹ

02:40 PM Jul 22, 2019 | Team Udayavani |

ತೆಲಸಂಗ: ತಾಲೂಕಿನಲ್ಲಿ ಸರಕಾರದಿಂದ ಕರ್ನಾಟಕ ಪಬ್ಲಿಕ್‌ ಸ್ಕೂಲ್ ತೆರೆಯುವ ಸೂಚನೆ ಮೇರೆಗೆ ಮಾಹಿತಿ ತಯಾರಿ ನಡೆಯುತ್ತಿದ್ದು, ತೆಲಸಂಗ ಹೋಬಳಿಯಲ್ಲಿಯೇ ಸ್ಕೂಲ್ ತೆರೆಯಬೇಕು. ತಪ್ಪು ಮಾಹಿತಿ ನೀಡಿ ತಾಲೂಕಿನ ಬೇರೆ ಗ್ರಾಮದಲ್ಲಿ ತೆರೆದರೆ ಶಿಕ್ಷಣ ಇಲಾಖೆ ವಿರುದ್ಧ ರಸ್ತೆ ತಡೆದು ಉಗ್ರ ಹೋರಾಟ ಮಾಡುವುದಾಗಿ ಯುವ ಮುಖಂಡ ಅಪ್ಪು ಜಮಾದರ ಎಚ್ಚರಿಸಿದ್ದಾರೆ.

Advertisement

ರವಿವಾರ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್ ತೆರೆಯುವಂತೆ ಆಗ್ರಹಿಸಿ ಸೇರಿದ್ದ ಸಭೆಯಲ್ಲಿ ಅವರು ಮಾತನಾಡಿ, ಹೋಬಳಿ ಗ್ರಾಮವಾದ ತೆಲಸಂಗದಲ್ಲಿಯೇ ಸರಕಾರದ ಪಬ್ಲಿಕ್‌ ಸ್ಕೂಲ್ ತೆರೆಯಬೇಕು. ಸರಕಾರಕ್ಕೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಪ್ಪು ಮಾಹಿತಿ ಒದಗಿಸಿದರೆ ಬೀದಿಗಿಳಿಯುವುದು ಅನಿವಾರ್ಯ ಎಂದರು. ಪಕ್ಕದ ಹಾಲಳ್ಳಿ ಪುಟ್ಟ ಗ್ರಾಮವಾದರೂ ಇಂಗ್ಲಿಷ್‌ ಮಾಧ್ಯಮ ಶಾಲೆ ತೆರೆಯಲಾಗಿದೆ. ತೆಲಸಂಗ ಪಟ್ಟಣದಲ್ಲಿ ಶಾಸಕರ ಮಾದರಿ ಶಾಲೆ ಇದ್ದರೂ ಇಂಗ್ಲಿಷ್‌ ಮಾಧ್ಯಮ ಶಾಲೆ ತೆರೆಯಲಿಲ್ಲ. 20 ಸಾವಿರ ಜನಸಂಖ್ಯೆ, ಅತಿ ಹೆಚ್ಚು ಮಕ್ಕಳ ಸಂಖ್ಯೆ ಇದ್ದರೂ ಸರಕಾರಿ ಪ್ರೌಢಶಾಲೆ ತೆರೆಯದಿರುವುದಕ್ಕೆ ಹಲವು ಅನುಮಾನ ಬರುತ್ತಿದೆ. ದಲಿತ, ಬಡ ಹಿಂದುಳಿದ ಮಕ್ಕಳು ಸರಕಾರಿ ಶಾಲೆಯಲ್ಲಿ ಓದುತ್ತಿವೆ. ಹೆಚ್ಚಿನ ಶುಲ್ಕ ತುಂಬಿ ಕಾನ್ವೆಂಟ್ ಸೇರಿಸಲು ಸಾಮರ್ಥ್ಯ ಇಲ್ಲದವರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರೂ ಪ್ರೌಢಶಾಲೆ, ಆಂಗ್ಲಮಾಧ್ಯಮ ಶಾಲೆ ಆರಂಭಿಸಲಿಲ್ಲ. ಸದ್ಯಕ್ಕೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಆರಂಭಿಸಲು ಆದೇಶವಿದೆ. ಈ ಶಾಲೆಯನ್ನು ತೆಲಸಂಗ ಗ್ರಾಮದಲ್ಲಿಯೇ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಅಥಣಿ ಕ್ಷೇತ್ರ ಶಿಕ್ಷಣ ಇಲಾಖೆ ಆಡಳಿತದ ವಿರುದ್ಧ ಹೋರಾಟ ಮಾಡುವುದಲ್ಲದೆ ರಾಜ್ಯ ಸರಕಾರಕ್ಕೆ ಪತ್ರ ಬರೆದು ದೂರು ನೀಡಲಾಗುವುದು ಎಂದು ಎಚ್ಚರಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ರವಿ ಗಸ್ತಿ, ಕಾಂಗ್ರೆಸ್‌ ಮುಖಂಡ ಸುರೇಶ ಹುಜರೆ, ಮಾಜಿ ಸೈನಿಕ ಸುಭಾಸ್‌ ಖೊಬ್ರಿ, ರವಿ ಸಿಂಧೆ, ರವಿ ಮನ್ನಪ್ಪಗೋಳ, ಸುರೇಶ ಕುಮಠಳ್ಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next