Advertisement

ಜಡ್ಜ್  ಗಳಿಗಾಗಿ ಆಗ್ರಹ

12:12 PM Feb 07, 2018 | Team Udayavani |

ಬೆಂಗಳೂರು: ನ್ಯಾಯಮೂರ್ತಿಗಳ ಸ್ಥಾನ ಭರ್ತಿಗೆ ಆಗ್ರಹಿಸಿ ರಾಜ್ಯ ವಕೀಲರ ಪರಿಷತ್‌ ಹಾಗೂ ಬೆಂಗಳೂರು ವಕೀಲರ ಸಂಘ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. 

Advertisement

ರಾಜ್ಯ ಹೈಕೋರ್ಟ್‌ನಲ್ಲಿ ನಿಗದಿಯಾಗಿರುವ 62 ನ್ಯಾಯಮೂರ್ತಿಗಳ ಪೈಕಿ ಕೇವಲ 25 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 47 ಜನ ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದ್ದು, ಶೇಕಡಾ 38.70ರಷ್ಟು ಮಾತ್ರ ಹೈಕೋರ್ಟ್‌  ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ.

 ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠ ಸೇರಿದಂತೆ ರಾಜ್ಯ ಹೈಕೋರ್ಟ್‌ನಲ್ಲಿ 2 ಲಕ್ಷ 50  ಸಾವಿರ ಪ್ರಕರಣಗಳು ಬಾಕಿ ಇದ್ದು, ನ್ಯಾಯಮೂರ್ತಿಗಳ ಕೊರತೆಯಿಂದ ಕಕ್ಷಿದಾರರಿಗೆ ನ್ಯಾಯದಾನ ವಿಳಂಬವಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ರಾಜ್ಯ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಮಾಡುವಂತೆ ನ್ಯಾಯವಾದಿಗಳು ಸೇರಿದಂತೆ ವಿವಿಧ ವಲಯಗಳಿಂದ ಪ್ರತಿಭಟನೆ  ಆರಂಭವಾಗಿದೆ. ಅಲ್ಲದೇ 2016 ರಿಂದ ಕರ್ನಾಟಕ ಹೈ ಕೋರ್ಟ್‌ಗೆ ಸಂಬಂಧಿಸಿದಂತೆ ಕೊಲಿಜಿಯಂನಿಂದ ಸುಮಾರು 45 ಶಿಫಾರಸ್ಸುಗಳಾಗಿದ್ದು,  ಅವುಗಳಲ್ಲಿ 12ಜನ ನ್ಯಾಯಮೂರ್ತಿಗಳ ನೇಮಕ ಮಾಡಲು ಸಾಧ್ಯವಾಗಿದೆ.

ಈ ಮಧ್ಯೆ 15 ಜನ ನ್ಯಾಯಮೂರ್ತಿಗಳು ನಿವೃತ್ತಿ ಹೊಂದಿದ್ದಾರೆ. ಈ  ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ನೇಮಕ ಮಾಡುವಂತೆ ಸಾಕಷ್ಟು ಒತ್ತಡ ಕೇಳಿ ಬಂದಿದ್ದರೂ, ನ್ಯಾಯಮೂರ್ತಿಗಳ ನೇಮಕ ಮಾಡುವ ಸಂವಿಧಾನಿಕ  ಅರ್ಹತೆ ಹೊಂದಿದವರು ಕಿವುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಕರ್ನಾಟಕ ಹೈ ಕೋರ್ಟ್‌ಗೆ  ನ್ಯಾಯಮೂರ್ತಿಗಳ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟವರಿಗೆ ಸೂಚಿಸು ವಂತೆ ಮುಖ್ಯಮಂತ್ರಿ ಪ್ರಧಾನಿಗೆ ಮನವಿ  ಮಾಡಿದ್ದಾರೆ. 

Advertisement

ಮಾಜಿ ಪ್ರಧಾನಿ, ನ್ಯಾ. ಗೋಪಾಲಗೌಡ ಸಾಥ್‌: ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಆಗ್ರಹಿಸಿ ರಾಜ್ಯ ವಕೀಲರ ಪರಿಷತ್‌ ಹಾಗೂ ಬೆಂಗಳೂರು ವಕೀಲರ  ಸಂಘ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿರುವ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಮಂಗಳವಾರ  ಧರಣಿಯಲ್ಲಿ ಪಾಲ್ಗೊಂಡಿದ್ದರು.

ಜತೆಗೆ ಮಾಜಿ ಪ್ರಧಾನಿ ಎಚ್‌.ಡಿ ದೇವೆಗೌಡರೂ ಧರಣಿ ನಿರತ ವಕೀಲರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಮಾತನಾಡಿದ ಎಚ್‌.ಡಿ ದೇವೆಗೌಡರು, ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿಯಿರುವುದರಿಂದ ಕಕ್ಷಿದಾರರಿಗೆ  ತೊಂದರೆಯಾಗುತ್ತಿದೆ.

ದೇಶದ ಮಾಜಿ ಪ್ರಧಾನಿಯಾಗಿ, ಕಕ್ಷಿದಾರರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ  ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಕೊಡಲು ಭೇಟಿಗೆ ಸಮಯ ಕೇಳಿದ್ದು, ಅವಕಾಶ ನೀಡಿದರೆ ಚರ್ಚಿಸುತ್ತೇನೆ ಎಂದರು. ನಿವೃತ್ತ ನ್ಯಾ. ವಿ.ಗೋಪಾಲಗೌಡ ಮಾತನಾಡಿ, ಪ್ರಜಾಪ್ರಭುತ್ವದ ನ್ಯಾಯದೇಗುಲವಾದ ಹೈಕೋರ್ಟ್‌ ನಲ್ಲಿ ನ್ಯಾಯಮೂರ್ತಿಗಳ ಕೊರತೆಯಿರುವುದು ಸರಿಯಲ್ಲ.

ಇದರಿಂದ ನ್ಯಾಯಾಂಗ  ವ್ಯವಸ್ಥೆಗೆ ತೊಂದರೆಯಾಗುತ್ತದೆ. ವಕೀಲರು ಹಾಗೂ ಕಕ್ಷಿದಾರರು ಸಂಕಷ್ಟ ಅನುಭವಿಸುತ್ತಾರೆ. ನ್ಯಾಯ  ಮೂರ್ತಿಗಳ ಹುದ್ದೆ ಖಾಲಿಯಿರಬಾರದು.  ಕೂಡಲೇ ಸುಪ್ರೀಂಕೋರ್ಟ್‌ ಕೊಲಿಜಿಯಂ ಹಾಗೂ ಕೇಂದ್ರ  ಸರ್ಕಾರ ನ್ಯಾಯಮೂರ್ತಿಗಳನ್ನು ನೇಮಕಮಾಡಲು ಮುಂದಾಗಬೇಕು ಎಂದು  ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಾಗಿ ಆಗ್ರಹಿಸುತ್ತಿದ್ದೇನೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next