Advertisement

ಸಾಗುವಳಿ ಭೂಮಿ ಸಕ್ರಮಕ್ಕೆ ಆಗ್ರಹ

03:27 PM May 06, 2022 | Team Udayavani |

ಹರಪನಹಳ್ಳಿ: ಕರ್ನಾಟಕದಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಘೋಷಣೆ ಅಡಿ ಭೂ ಸುಧಾರಣೆ ಕಾನೂನಿಗಾಗಿ, ಬಗರ್‌ ಹುಕ್ಕುಂ ಸಾಗುವಳಿ ಭೂಮಿ ಸಕ್ರಮಕ್ಕಾಗಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ರೂಪಿಸಲು ಅಖಿಲ ಭಾರತ ಕಿಸಾನ್‌ ಸಭಾ ಮೇ 9 ಮತ್ತು 10ರಂದು ಕಲಬುರಗಿಯಲ್ಲಿ ರಾಜ್ಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಕಿಸಾನ್‌ ಸಭಾ ರಾಜ್ಯ ಕಾರ್ಯದರ್ಶಿ ಡಾ| ಕೆ.ಎಸ್. ಜನಾರ್ಧನ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗುತ್ತಿವೆ, ದೇಶದ ನೂರಾರು ರೈತ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾನೂನು ನೀತಿಗಳ ವಿರುದ್ಧ ದೇಶಾದಾದ್ಯಂತ ಚಳುವಳಿ ತೀವ್ರಗೊಂಡಿದ್ದು ರೈತರು ರಾಜಕೀಯವಾಗಿ ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ಹೋರಾಟ ಮುಂದುವರೆಸುವುದು ಅನಿವಾರ್ಯತೆ ಇದೆ ಎಂದರು.

ದೇಶದಲ್ಲಿ ರೈತರ ವಿರೋಧಿಯಾಗಿ ಕೃಷಿ ಕಾನೂನುಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ 250ಕ್ಕು ಹೆಚ್ಚು ರೈತ ಸಂಘಟನೆಗಳು ನಿರಂತರ ಒಂದು ವರ್ಷ ಹೋರಾಟದ ಪರಿಣಾಮ ಕೇಂದ್ರ ಸರ್ಕಾರ ಕಾಯ್ದೆಗಳನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ, ಮುಂದಿನ ದಿನಗಳಲ್ಲಿ ಮತ್ತೆ ಜಾರಿಗೊಳಿಸಲು ಮುಂದಾದರೆ ರೈತರು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ತಾಲೂಕಿನಲ್ಲಿ ಸಮಗ್ರ ನೀರಾವರಿ ಕುಂಠಿತಗೊಂಡಿದೆ. ಆದ್ದರಿಂದ ಹರಪನಹಳ್ಳಿ ತಾಲೂಕು ಒಳಗೊಂಡಂತೆ ಬರಪೀಡಿತ ಪ್ರದೇಶಗಳನ್ನು ತುಂಗಭದ್ರಾ ನದಿ ನೀರನ್ನು ರೈತರಿಗೆ ಕಲ್ಪಿಸುವ ಮೂಲಕ ನೀರಾವರಿಗೆ ಆದ್ಯತೆ ನೀಡಬೇಕು, ರೈತರು ಕಷ್ಟಪಟ್ಟು ಬೆಳೆದ ಬೆಳೆಯ ಫಲಕ್ಕೆ ಸರಿಯಾದ ಸಮಯಕ್ಕೆ ವೈಜ್ಞಾನಿಕ ಬೆಲೆಯೊಂದಿಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕು, ರಾಜ್ಯದ ಕೆಲವು ಕಡೆಗಳಲ್ಲಿ ಕಾಡುಪ್ರಾಣಿಗಳಿಗೆ ಸರಿಯಾದ ಆಹಾರ ನೀರು ಇಲ್ಲದೆ ರೈತರ ಬೆಳೆ ಹಾಗೂ ಧಾನ್ಯಗಳನ್ನು ನಾಶಗೊಳಿಸುತ್ತಿವೆ. ರೈತರು ಬೆಳೆವಿಮೆ ತುಂಬಿದರು ಸರಿಯಾಗಿ ಬೆಳೆವಿಮೆ ಪಾವತಿಯಾಗುತ್ತಿಲ್ಲ. ಈ ಎಲ್ಲಾ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಒಂದು ವೇಳೆ ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ರಾಜ್ಯ ಸಮ್ಮೇಳನದಲ್ಲಿ ಸೂಕ್ತ ನಿರ್ಧಾರದೊಂದಿಗೆ ಚಳವಳಿಯನ್ನು ರೂಪಿಸುವುದಾಗಿ ಹೇಳಿದರು. ಇದೇ ವೇಳೆ ಅಖಿಲ ಭಾರತ ಕಿಸಾನ್‌ ಸಭಾಗೆ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Advertisement

ಪದಾಧಿಕಾರಿಗಳ ಆಯ್ಕೆ

ವಿಜಯನಗರ ಜಿಲ್ಲಾ ಅಖಿಲ ಭಾರತ ಕಿಸಾನ್‌ ಸಭಾ ಜಿಲ್ಲಾಧ್ಯಕ್ಷರಾಗಿ ಗುಡಿಹಳ್ಳಿ ಹಾಲೇಶ್‌ ಹಾಗೂ ಕಾರ್ಯದರ್ಶಿಯಾಗಿ ಶಾಂತರಾಜ ಜೈನ್‌ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಟಿ.ಪರಸಪ್ಪ, ಮತ್ತಿಹಳ್ಳಿ ನಾಗರಾಜಪ್ಪ, ಸಹಕಾರ್ಯದರ್ಶಿ ಡಿ.ಮುಕುಂದಗೌಡ, ಸಂಘಟನಾ ಕಾರ್ಯದರ್ಶಿ ಮರಿಗೌಡ, ಖಜಾಂಚಿಯಾಗಿ ಹೊನ್ನಪ್ಪ ಸಿ. ಹಾಗೂ ಕಾರ್ಯಕಾರಿಣಿಗೆ 12ಕ್ಕೂ ಹೆಚ್ಚು ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ ಎಂದು ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ನೂತನ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್‌, ಕಾರ್ಯದರ್ಶಿ ಶಾಂತರಾಜ ಜೈನ್‌, ಕೊಟ್ರೇಶ ಬಳಿಗನೂರು, ಮತ್ತಿಹಳ್ಳಿ ನಾಗರಾಜ, ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next