Advertisement
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣ ದಲ್ಲಿ ಜಿಪಂ, ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಜಲಶಕ್ತಿ ಅಭಿಯಾನದಡಿ ಕೇಂದ್ರದ ನಿಯೋಗದೊಂದಿಗೆ ಸ್ವಯಂಸೇವಾ ಸಂಸ್ಥೆಗಳು ಹಾಗೂ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ದೇಶದಲ್ಲೇ ಕಡಿಮೆ ಮಳೆ ಬೀಳುವ ಹಾಗೂ ಬರಪೀಡಿತ ರಾಜ್ಯಗಳಲ್ಲಿ ಎರಡನೇ ಸ್ಥಾನ ಕರ್ನಾಟಕ ರಾಜ್ಯಕ್ಕಿದೆ. ನೀರಿನ ಜಾಗೃತಿ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸುವ ಮೊದಲೇ ಕರ್ನಾಟಕ ರಾಜ್ಯದಲ್ಲಿ ಜಲಾಮೃತ ಕಾರ್ಯಕ್ರಮಗಳ ಮೂಲಕ ಜಲಮೂಲಗಳ ಪುನಶ್ಚೇತನ ಹಾಗೂ ಜಲರಕ್ಷಣೆ ಜಾಗೃತಿ ಆರಂಭಿಸಿರುವುದು ಸಂತೋಷದಾಯಕ. ದೇಶದ 252 ತಾಲೂಕುಗಳನ್ನು ಆಯ್ಕೆ ಮಾಡಿ ನೀರು ಸಂರಕ್ಷಣೆ, ನೀರಿನ ಮಿತ ಬಳಕೆ ಕುರಿತಂತೆ ಸರ್ಕಾರೇತರ ಸ್ವಯಂ ಸೇವಾ ಸಂಘಗಳು, ರೈತರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅನುಷ್ಠಾನಗೊಂಡಿರುವ ಜಲರಕ್ಷಣೆ ಮಾದರಿ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಜಲಶಕ್ತಿ ವೃದ್ಧಿಸಲು ಅಭಿಯಾನ: ಜಿಪಂ ಸಿಇಒ ಕೆ.ಲೀಲಾವತಿ ಮಾತನಾಡಿ, ನೀರಿನ ಪ್ರಜ್ಞಾವಂತ ಬಳಕೆ, ಮಿತ ಬಳಕೆ, ಜಲ ಸಾಕ್ಷರತೆ, ಮಳೆ ಆಕರ್ಷಣೆಗೆ ಹಸರೀಕರಣ, ಸಸಿ ನೆಡುವ ಕಾರ್ಯಕ್ರಮ, ಮಳೆ ಕೊಯ್ಲು, ಕೆರೆ-ಕಟ್ಟೆ, ಹಳ್ಳ-ಕೊಳ್ಳ, ಬಾವಿಗಳ ಜಲಮರುಪೂರ್ಣದಂಥ ಕಾರ್ಯಕ್ರಮ ಉತ್ತೇಜಿಸುವ ಕಾರ್ಯಕ್ರಮ ಇದಾಗಿದೆ. ಇಂದು ರೈತರ ಸ್ವಯಂ ಸೇವಾ ಸಂಸ್ಥೆಗಳ ಸಲಹೆ ಸ್ವೀಕರಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಜಲ ಸಂವಾದ: ಜಲಶಕ್ತಿ ವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತಂತೆ ಸಂವಾದದಲ್ಲಿ ಭಾಗವಹಿಸಿದ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳಾದ ವನಸಿರಿ ಸಂಸ್ಥೆಯ ಎಸ್.ಪಿ. ಬಳೆಗಾರ, ಕಾಕೋಳ ಗ್ರಾಮದ ಪ್ರಗತಿಪರ ರೈತ ಚನ್ನಬಸಪ್ಪ, ಮೋಟೆಬೆನ್ನೂರಿನ ರಮೇಶ ಕೃಷ್ಣಪ್ಪ, ಕಮದೋಡದ ಯಲ್ಲಪ್ಪ ಶಿದ್ಲಿಂಗಪ್ಪ, ಅಬಲೂರಿನ ರೈತ ಮಹಿಳೆ ಶಶಿಕಲಾ ಇತರರು ಮಾತನಾಡಿ, ಜಮೀನುಗಳಲ್ಲಿ ನೀರು ಇಂಗಿಸುವ ವ್ಯವಸ್ಥೆಗೆ ಆದ್ಯತೆ ನೀಡಬೇಕು. ನೀಲಗಿರಿ ಪ್ಲಾಂಟ್‌ಗಳನ್ನು ತೆರೆವುಗೊಳಿಸಬೇಕು. ಬೆಟ್ಟಗುಡ್ಡಗಳಿಂದ ವ್ಯರ್ಥವಾಗಿ ಹರಿದು ಹೋಗುವ ನೀರು ಸಂಗ್ರಹಿಸಿ ಇಂಗಿಸುವ, ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು. ಕಾಲುವೆಗಳ ಮೂಲಕ ನೀರು ಹರಿಸಿ ಕೆರೆ ತುಂಬಿಸಿ ಸಂಗ್ರಹಿಸುವ ಕೆಲಸವಾಗಬೇಕು. ನಿರುಪಯುಕ್ತ ಕೊಳವೆಬಾವಿಗಳನ್ನು ಜಿಗುಟು ಮಣ್ಣಿನಿಂದ ತುಂಬಬೇಕು. ಕನಿಷ್ಠ ಐದು ಎಕರೆ ಜಮೀನು ಇರುವ ರೈತ ಒಂದು ಕೃಷಿ ಹೊಂಡ, ಕನಿಷ್ಠ 500 ಸಸಿ ನೆಡುವುದನ್ನು ಕಡ್ಡಾಯಗೊಳಿಸಬೇಕು ಎಂಬ ಸಲಹೆಗಳು ಕೇಳಿಬಂದವು.
ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಪುಣೆಯ ನೀರು ಮತ್ತು ಇಂಧನ ಸಂಶೋಧನಾ ಕೇಂದ್ರದ ವಿಜ್ಞಾನಿ ಬಿ.ಕೆ. ಗೌತಮ ಹಾಗೂ ವಿಜ್ಞಾನಿ ಕುಮಾರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಬಿ., ಕೃಷಿ ವಿವಿಯ ಹನುಮನಮಟ್ಟಿ ಕೇಂದ್ರದ ಕೇಂದ್ರ ಡೀನ್ ಡಾ.ಬಸವರಾಜಪ್ಪ ಆರ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಭೋಗಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅಶೋಕ ಇತರರು ಉಪಸ್ಥಿತರಿದ್ದರು.