Advertisement

ಗೋವಿನಜೋಳ ಖರೀದಿ ಕೇಂದ್ರಕ್ಕೆ ಆಗ್ರಹ

03:32 PM Feb 27, 2020 | Suhan S |

ಮುಂಡರಗಿ: ಪಟ್ಟಣದಲ್ಲಿ ಗೋವಿನಜೋಳ ಖರೀದಿ ಕೇಂದ್ರವನ್ನು ತೆರೆದು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು. ಖರೀದಿ ಕೇಂದ್ರವನ್ನು ಸರಕಾರವು ತೆರೆಯದೇ ಇದ್ದರೆ ಮಾ. 5ರಂದು ತಹಶೀಲ್ದಾರ್‌ ಕಾರ್ಯಾಲಯದ ಎದುರು ರೈತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ಕೆ.ಎ. ದೇಸಾಯಿ ಹೇಳಿದರು.

Advertisement

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷದ ಹಿಂದೆ 2018ರ ಫೆಬ್ರವರಿ ಮತ್ತು ಮಾರ್ಚ್‌ ಅವಧಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 2,800 ರೂ.ಗಳಿಗೆ ಕ್ವಿಂಟಲ್‌ ಗೋವಿನಜೋಳ ಖರೀದಿಸಲಾಗಿತ್ತು. ಆದರೆ ಈ ವರ್ಷ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನಿಷ್ಠ 1,355 ರೂ. ಗಳು, ಗರಿಷ್ಠ 1,609 ರೂ.ಗೆ ಕ್ವಿಂಟಲ್‌ ಗೋವಿನಜೋಳವು ಮಾರಾಟವಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಆದ್ದರಿಂದ ರೈತರಿಗೆ ಅನುಕೂಲ ಕಲ್ಪಿಸಲು ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು. ಧಾರವಾಡದ ಕೆಎಂಎಫ್‌ನ ಆಡಳಿತ ಮಂಡಳಿಯು ಗೋವಿನಜೋಳ 2200 ರೂ.ಗಳ ಕ್ವಿಂಟಲ್‌ನಂತೆ ಖರೀದಿ ಮಾಡುತ್ತಿದ್ದಾರೆ. ಆದರೆ ಕೆಎಂಎಫ್‌ನವರು ರೈತರಿಂದ ಗೋವಿನಜೋಳ ಖರೀದಿಸದೆ ಟೆಂಡರ್‌ ಮೂಲಕ ಖರೀದಿದಾರರಿಂದ ಖರೀದಿಸುತ್ತಿದ್ದಾರೆ.  ಆದಕಾರಣ ಕೆಎಂಎಫ್‌ನವರು ರೈತರಿಂದ ನೇರವಾಗಿ ಗೋವಿನಜೋಳ ಖರೀದಿಸುವಂತೆ ಸರಕಾರವು ಆದೇಶಿಸಬೇಕು. ಸರಕಾರವು ಪ್ರತಿ ಕ್ವಿಂಟಲ್‌ ಗೋವಿನಜೋಳಕ್ಕೆ ಕನಿಷ್ಟ 3000 ರೂ.ಗಳ ಬೆಂಬಲ ಬೆಲೆ ನೀಡಿ ಖರೀದಿಸಲು ಮುಂದಾಗಬೇಕು ಎಂದರು.

ಅಂದಪ್ಪ ತಿಪ್ಪಣ್ಣವರ, ಹನುಮಂತಪ್ಪ ಹೊಸಮನಿ, ಗೂರಪ್ಪ ಇಟಗಿ, ಮುದಿಯಪ್ಪ ತಿಪ್ಪಣ್ಣವರ, ನೀಲಪ್ಪ ಡೋಣಿ, ಶರಣಪ್ಪ ಹೊಸಮನಿ, ಸಿದ್ದಪ್ಪ ಇಟಗಿ, ಉಮೇಶ ಲಕ್ಕುಂಡಿ, ಗುರುನಾಥ ಲಕ್ಕುಂಡಿ, ನಿಂಗನಗೌಡ ಗೌಡರ, ಬಸವನಗೌಡ ಗೌಡರ, ಗ್ಯಾನಪ್ಪ ಹೊಸಮನಿ, ಈರಪ್ಪ ಚವಡಿ, ನಿಂಗನಗೌಡ ಗೌಡರ ಸೇರಿದಂತೆ ಮತ್ತಿತರರು ಇದ್ದರು. ಸುದ್ದಿಗೋಷ್ಠಿ ನಂತರ ರೈತರು ತಹಶೀಲ್ದಾರ್‌ ಕಾರ್ಯಾಲಯಕ್ಕೆ ಗೋವಿನಜೋಳ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ತಹಶೀಲ್ದಾರ್‌ ಡಾ| ವೆಂಕಟೇಶ ನಾಯಕಗೆ ಮನವಿ  ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next