Advertisement

ಬಗರ್‌ ಹುಕುಂ ಸಾಗುವಳಿ ಹಕ್ಕುಪತ್ರ ವಿತರಣೆಗೆ ಆಗ್ರಹ

12:04 PM May 21, 2019 | Suhan S |

ದಾವಣಗೆರೆ: ಅರಣ್ಯಭೂಮಿ, ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ) ನೇತೃತ್ವದಲ್ಲಿ ಸಾಗುವಳಿದಾರರರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಶ್ರೀ ಜಯದೇವ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಆಡಳಿತ ಕೂಡಲೇ ತಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದೇ ಹೋದಲ್ಲಿ ಮಾಯಕೊಂಡ ಹೋಬಳಿಯ ಎಲ್ಲಾ ಕಡೆ ತಹಶೀಲ್ದಾರ್‌ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಅರಣ್ಯಭೂಮಿ, ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಸಂಘಟನೆಯ ನೇತೃತ್ವದಲ್ಲಿ ವಿವಿಧ ಹಂತದ ಹಲವಾರು ಹೋರಾಟ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ 1992 ಮತ್ತು 1999 ರಲ್ಲಿ ಬಗರ್‌ ಹುಕುಂ ಸಾಗುವಳಿದಾರರಿಂದ ಹಕ್ಕುಪತ್ರಕ್ಕಾಗಿ ಫಾರಂ ನಂಬರ್‌ 52 ಮತ್ತು ಫಾರಂ ನಂಬರ್‌ 53 ಅರ್ಜಿ ಆಹ್ವಾನಿಸಿತ್ತು. ಅದರಂತೆ ಅನೇಕರು ಸಲ್ಲಿಸಿರುವ ಅರ್ಜಿಗಳನ್ನು ಬಗರ್‌ ಹುಕುಂ ಸಮಿತಿ ಸರಿಯಾಗಿ ನಿರ್ವಹಣೆ ಮಾಡಿಯೇ ಇಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಈಗ ಸರ್ಕಾರ ಫಾರಂ ನಂಬರ್‌ 57 ಆಹ್ವಾನಿಸಿದೆ. ದಾವಣಗೆರೆ ತಾಲೂಕಿನಲ್ಲೇ 2,650 ಅರ್ಜಿಗಳನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಈಗಾಗಲೇ ದಾವಣಗೆರೆ ತಾಲೂಕು ಮತ್ತು ಮಾಯಕೊಂಡ ಕ್ಷೇತ್ರದ ಬಗರ್‌ ಹುಕುಂ ಸಮಿತಿ ಸಹ ರಚನೆಯಾಗಿವೆ. ಅದೇ ರೀತಿ ಇತರೆಡೆಯೂ ಬಗರ್‌ ಹುಕುಂ ಸಮಿತಿ ರಚಿಸಬೇಕು ಹಾಗೂ ಫಾರಂ ನಂ. 52, 53 ಹಾಗೂ 57 ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡುವ ಮೂಲಕ ಭೂಮಿ ಹಂಚಿಕೆ ಹಾಗೂ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಕಂದಾಯ ಇಲಾಖೆ 2000 ಹಾಗೂ 2004ರಲ್ಲಿ ತನ್ನ ವ್ಯಾಪ್ತಿಯಲ್ಲಿನ ಅರಣ್ಯ ಭೂಮಿಯನ್ನು ಸಂಬಂಧಿತ ಇಲಾಖೆಗೆ ವರ್ಗಾಯಿಸಿದೆ. ಅಂತಹ ಸಂದರ್ಭದಲ್ಲಿ ಅರಣ್ಯ ಅತಿಕ್ರಮಣದಾರರ ಅರ್ಜಿ ಪರಿಶೀಲನೆ ಮಾಡುವಾಗ ಯಾವ ವರ್ಷದ ದಾಖಲೆ ಆಧಾರದ ಮೇಲೆ ಭೂಮಿಯನ್ನು ಮಂಜೂರಾತಿ ಮಾಡುತ್ತಿದೆ ಎಂಬುದನ್ನು ಸರ್ಕಾರ, ತಹಶೀಲ್ದಾರ್‌ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

Advertisement

ಸಂಘಟನೆಯ ಎಲ್ಲಾ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಇಲ್ಲದೇ ಹೋದಲ್ಲಿ ಸಂಘಟನೆ ನೇತೃತ್ವದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌, ಹೊನ್ನೂರು ಸಿದ್ದವೀರಪ್ಪ, ಗುಮ್ಮನೂರು ಬಸವರಾಜ್‌, ಕೋಲ್ಕುಂಟೆ ಬಸಣ್ಣ, ಕುಕ್ಕುವಾಡ ಪರಮೇಶ್‌, ಕಾಡಜ್ಜಿ ಪ್ರಕಾಶ್‌, ಆಲೂರು ಪರಶುರಾಮ್‌, ಬಾತಿ ಮಂಜಪ್ಪ, ಹುಚ್ಚವ್ವನಹಳ್ಳಿ ಪ್ರಕಾಶ್‌, ಚಿಕ್ಕಬೂದಾಳ್‌ ಭಗತ್‌ಸಿಂಹ, ಹೂವಿನಮಡು ನಾಗರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next