ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿನ ರಂಗಕೇಂದ್ರಗಳಿಗಾಗಿ ಈ ಹಿಂದೆ ನಾಟಕ ಅಕಾಡೆಮಿ ರೂಪಿಸಿದ್ದ “ರಂಗ ಬೆಳಕು’ (ಸ್ಟೇಜ್ ಲೈಟ್) ಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಡೆಹಿಡಿದಿದೆ. ಗ್ರಾಮೀಣ ಪ್ರದೇಶದಲ್ಲಿರುವ ರಂಗಕೇಂದ್ರಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನಾಟಕ ಅಕಾಡೆಮಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ “ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ’, ಹಾಸನ ಜಿಲ್ಲೆಯ ರಕ್ಷಿದಿಯಲ್ಲಿರುವ “ಜೈ ಕರ್ನಾಟಕ ಸಂಘ’, ಕೋಲಾರದ “ಆದಿಮ’, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ “ಜನಪದರು ಸಾಂಸ್ಕೃತಿಕ ವೇದಿಕೆ’ಗೆ ಸ್ಟೇಜ್ ಲೈಟ್‌ಗಳನ್ನು ನೀಡಲು ತೀರ್ಮಾನ ಕೈಗೊಂಡಿತ್ತು.
ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಅಕಾಡೆಮಿ ಅಧ್ಯಕ್ಷರು ನಿರ್ಗಮಿಸಿದ್ದು, ಸ್ಟೇಜ್ ಲೈಟ್ ನೀಡುವುದು ಸೇರಿದಂತೆ ಹಲವು ಯೋಜನೆಗಳನ್ನು ತಡೆಹಿಡಿಯಲಾಗಿದೆ.ಹೀಗಾಗಿ ಸ್ಟೈಜ್ ಲೈಟ್‌ಗಳಿಗಾಗಿ ಸಾವಿರಾರು ರೂ.ನೀಡಿ ರಂಗಪ್ರದರ್ಶನ ಏರ್ಪಡಿಸುವ ಸಂದಿಗ್ಧತೆ ಎದುರಾಗಿದೆ.
12 ಲಕ್ಷ ರೂ.ಗಳ ಯೋಜನೆ: ರಂಗಮಂದಿರಗಳ ದೀಪ ವ್ಯವಸ್ಥೆಗಾಗಿ ಈ ಹಿಂದೆ ನಾಟಕ ಅಕಾಡೆಮಿ 12 ಲಕ್ಷ ರೂ.ಮೀಸಲಿಟ್ಟಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ಟೆಂಡರ್ ಕೂಡ ಕರೆದಿತ್ತು. ಇದು ದೊಡ್ಡ ಮೊತ್ತವಾಗಿರುವ ಹಿನ್ನೆಲೆಯಲ್ಲಿ ಇ-ಟೆಂಡರ್ ಪ್ರಕ್ರಿಯೆ ಕೂಡ ನಡೆದಿತ್ತು .ಮುಂದಿನ ಹಂತಗಳಲ್ಲಿ ಮತ್ತಷ್ಟು ರಂಗಕೇಂದ್ರಗಳಿಗೆ ದೀಪ ವ್ಯವಸ್ಥೆ ಕಲ್ಪಿಸಲು ಆಲೋಚನೆ ಕೂಡ ನಡೆದಿತ್ತು. ಆದರೆ ಸರ್ಕಾರ ಬದಲಾದ ನಂತರ ಅಕಾಡೆಮಿ ಅಧ್ಯಕ್ಷರು ಕೂಡ ನಿರ್ಗಮಿಸಿದ್ದು ,ಸ್ಟೇಜ್ ಲೈಟ್ ಯೋಜನೆ ಮುಂದುವರಿಯುತ್ತೋ ಅಥವಾ ಇಲ್ಲವೋ ಎಂಬ ಆತಂಕ ರಂಗಾಸಕ್ತರಲ್ಲಿ ಮೂಡಿದೆ.
ರಂಗಮಂದಿರಗಳಿಗೆ ದೀಪಕಲ್ಪಿಸಿ: ಗ್ರಾಮಾಂತರ ಪ್ರದೇಶಗಳಲ್ಲಿ ರಂಗಕೇಂದ್ರ ನಿರ್ಮಿಸಿ ರಂಗಕಾರ್ಯ ಮಾಡುವುದು ಸುಲಭದ ಕೆಲಸವಲ್ಲ.ಉತ್ತಮ ರಂಗಸಜ್ಜಿಕೆ ಜೊತೆಗೆ ಲೈಟ್‌ಗಳು ಕೂಡ ಬೇಕಾಗುತ್ತದೆ.ಸುಮಾರು 100 ರಿಂದ 200 ಸ್ಟೇಜ್‌ಲೈಟ್‌ಗಳ ಅವಶ್ಯಕತೆ ಇದೆ.ಇವುಗಳಿಗೆ ಹಣಕೊಟ್ಟು ಬಾಡಿಗೆ ತರುವುದು ಸುಲಭದ ಮಾತಲ್ಲ ಎಂದು ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಜೀವನ್‌ರಾಮ್ ಸುಳ್ಯ ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ರಂಗಕೇಂದ್ರಗಳನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಯೋಜನೆ ಮುಂದುವರಿಸುವಂತೆ ಹೊಸಕೋಟೆ ಜನಪದರು ಸಾಂಸ್ಕೃತಿಕ ವೇದಿಕೆಯ ರಾಮಕೃಷ್ಣ ಬೇಳೂ¤ರು ಒತ್ತಾಸಿದ್ದಾರೆ.
ರಂಗಚಟುವಟಿಕೆ ಮೇಲೆ ಪ್ರಭಾವ: ಈ ಬಗ್ಗೆ
“ಉದಯವಾಣಿ’ಯೊಂದಿಗೆ ಮಾತನಾಡಿದ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಜೆ.ಲೋಕೇಶ್, ಕೆಲವು ರಂಗಕರ್ಮಿಗಳು ಕಷ್ಟಪಟ್ಟು ಥಿಯೇಟರ್ ಕಟ್ಟಿದ್ದಾರೆ. ಆದರೆ ಅಲ್ಲಿ ಲೈಟಿಂಗ್ ವ್ಯವಸ್ಥೆ ಸರಿಯಾಗಿಲ್ಲ. ಬೇರೆ ಕಡೆಗಳಿಂದ ಅವುಗಳನ್ನು ಬಾಡಿಗೆಗೆ ತರಬೇಕಾದರೆ 7-8 ಸಾವಿರ ರೂ. ನೀಡಬೇಕಾಗುತ್ತದೆ. ಇದು ರಂಗಭೂಮಿ ಚಟುವಟಿಕೆಗಳ ಮೇಲೆ ಬಹಳಷ್ಟು ಪ್ರಭಾವ ಬೀರಲಿದೆ.
ಆ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಇಲಾಖೆಯ ಹಿರಿಯ ಅಧಿಕಾರಿಗಳು ಈ ಯೋಜನೆ ತಡೆಹಿಡಿದಿದ್ದಾರೆ. ಮುಂದಿನ ಅಧ್ಯಕ್ಷರು ಈ ಯೋಜನೆ ಮುಂದು ವರಿಸಬಹುದು ಅಥವಾ ಕೈ ಬಿಡಬಹುದಾಗಿದೆ ಎಂದಿದ್ದಾರೆ.
ನಾಟಕ ಅಕಾಡೆಮಿ ಸೇರಿದಂತೆ ಹಲವು ಅಕಾಡೆಮಿಗಳು ಉತ್ತಮ ಯೋಜನೆಗಳನ್ನು ರೂಪಿಸಿವೆ. ರಂಗಭೂಮಿ ಬೆಳವಣಿಗೆ ದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಯೋಜನಗೆಳನ್ನು ಹಾಗೆಯೇ ಮುಂದುವರಿಸಿಕೊಂಡು ಎಂದು ಆಗ್ರಹಿಸಿದ್ದಾರೆ.
-ಶ್ರೀನಿವಾಸ್ ಜಿ.ಕಪ್ಪಣ್ಣ, ಹಿರಿಯ ರಂಗಕರ್ಮಿ
* ದೇವೇಶ ಸೂರಗುಪ್ಪ