ಚಿಂಚೋಳಿ: ತಾಲೂಕಿನ ಚಿಮ್ಮನಚೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರ ಹಣದ ದುರ್ಬಳಕೆ ಮತ್ತು ರೈತರಿಂದ ಪಡೆದ ಲಂಚದ ಬಗ್ಗೆ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಪಿ ಇಶಾ ಪಂತ್ ಅವರಿಗೆ ನಿವೃತ್ತ ಕಾರ್ಯದರ್ಶಿ ಸಂಗಾರೆಡ್ಡಿ ಮನವಿ ಮಾಡಿದರು.
ಗ್ರಾಮದ ಹನುಮಾನ ದೇವಾಲಯ ಆವರಣದಲ್ಲಿ ನಡೆದ ನಿಮ್ಮ ಮನೆ ಬಾಗಿಲಿಗೆ ಪೊಲೀಸ್ ಸಂವಾದ ಕಾರ್ಯಕ್ರಮದಲ್ಲಿ ಸಂಗಾರೆಡ್ಡಿ ಮಾತನಾಡಿ, 2019-20ನೇ ಸಾಲಿನಲ್ಲಿ ತೊಗರಿ ಖರೀದಿಗೆ ಕೊಟ್ಟ ರೈತನ ಹೆಸರಿನ ಖಾತೆಗೆ ಹಣ ಜಮೆ ಮಾಡದೇ ಬೇನಾಮಿ ಹೆಸರಿನಲ್ಲಿರುವ ಖಾತೆಗೆ ಹಣ ಹಾಕಲಾಗಿದೆ. ಆಭರಣ ಅಡವು ಇಲ್ಲದೇ ಸಾಲ ಕೊಡಲಾಗಿದೆ. ಬ್ಯಾಂಕ್‌ನಲ್ಲಿಟ್ಟ ವೃದ್ಧರು, ವಿಧವೆಯರು ಇಟ್ಟಿದ್ದ ಮುದ್ದತ್ತು ಮೀರಿದ ಠೇವಣಿ ಹಣ ಕೊಟ್ಟಿಲ್ಲವೆಂದು ಎಸ್ಪಿ ಗಮನಕ್ಕೆ ತಂದರು.
ಚಿಮ್ಮನಚೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರ ರೈತರ ಹೆಸರಿನಲ್ಲಿರುವ ಹಣ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಗಾರೆಡ್ಡಿ ಎಸ್‌ಪಿಗೆ ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ಪ್ರಕರಣ ದಾಖಲಿಸಿರುವ ಕುರಿತು ಪಿಎಸ್‌ಐ ಮಂಜುನಾಥರೆಡ್ಡಿ ಎಸ್ಪಿ ಗಮನಕ್ಕೆ ತಂದರು. ಎಸ್ಪಿ ಇಶಾ ಪಂತ್ ಮಾತನಾಡಿ, ಪ್ರಕರಣದ ಕುರಿತು ಸಂಪೂರ್ಣ ತನಿಖೆ ಕೈಗೊಂಡು ನ್ಯಾಯ ದೊರಕಿಸಲು ಪಿಎಸ್‌ಐಗೆ ಸೂಚಿಸಿದರು.
ರಾಮರೆಡ್ಡಿ ಪಾಟೀಲ, ಶರಣರಡ್ಡಿ ಮೊಗಲಪ್ಪನೋರ, ಸಿರಾಜ ಮೋತಿರಾಮ ನಾಯಕ, ಜಗನ್ನಾಥ, ಲಕ್ಷ್ಮಣ ಆವಂಟಿ ಇನ್ನಿತರರು ಭಾಗವಹಿಸಿದ್ದರು.