ರಾಯಚೂರು: ತುಂಗಭದ್ರಾ ಎಡದಂಡೆಕಾಲುವೆ, ನಾರಾಯಣಪುರ ಬಲದಂಡೆ ಕಾಲುವೆಗಳ ಗೇಜ್ ಸರಿಯಾಗಿ ನಿರ್ವಹಣೆಯಾಗದ ಕಾರಣ ಕೊನೆ ಭಾಗದ ರೈತರಿಗೆ ನೀರು ಸಿಗದಾಗಿದೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ರೈತ ಮುಖಂಡರು ಜಿಲ್ಲಾ ಧಿಕಾರಿಗೆ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ರೈತ ಮುಖಂಡರ ಸಭೆಯಲ್ಲಿ ನೀರಾವರಿ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ರೈತ ಮುಖಂಡರು, ನೀರಾವರಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಗೇಜ್ ನಿರ್ವಹಿಸದ ಕಾರಣ ಕಾಲುವೆ ಕೆಳಭಾಗದ ರೈತರಿಗೆ ಕಣ್ಣೀರೇ ಗತಿ ಎನ್ನುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ನೀರು ಹರಿಸಿದಾಗ ಅಕ್ರಮ ಜರುಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಅಧಿಕಾರಿಗಳಿಗೂ ಸೂಕ್ತ ನಿರ್ದೇಶನ ನೀಡಲಾಗುವುದು. ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಕೂಡಲೇ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಮಸ್ಯೆಗಳು ನಮ್ಮ ಹಂತದಲ್ಲಿಯೇ ಇತ್ಯರ್ಥಗೊಳ್ಳುತ್ತಿದ್ದರೆ ಕೂಡಲೇ ಬಗೆಹರಿಸುವೆ. ಸರ್ಕಾರದ ಗಮನಕ್ಕೆ ತರಬೇಕಿದ್ದಲ್ಲಿ ಕೊಂಚ ವಿಳಂಬವಾಗಬಹುದು ಎಂದರು.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ಫಸಲ್ ಬಿಮಾ ಯೋಜನೆ ಲಾಭ ಕೆಲವೇ ರೈತರಿಗೆ ತಲುಪಿದೆ. ಇದು ಎಲ್ಲ ರೈತರಿಗೆ ತಲುಪಿದಾಗ ಮಾತ್ರ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯ. ಇಲಾಖೆಯವರು ಕೇವಲ ವಿಮೆ ಮಾಡಿಸಿ ಎಂದು ಹೇಳುತ್ತಾರೆ. ಆದರೆ, ಪರಿಹಾರ ಮಾತ್ರ ಬರುತ್ತಿಲ್ಲ. ಜಿಲ್ಲೆಯಲ್ಲಿ ಈ ಹಿಂದೆ 7 ತಾಲೂಕು ಬರಪೀಡಿತ ಎಂದು ಘೋಷಿಸಲಾಗಿತ್ತು. ಈ ವರ್ಷ ಕೇವಲ 3 ತಾಲೂಕುಗಳನ್ನು ಮಾತ್ರ ಘೋಷಿಸಲಾಗಿದೆ. ಈ ಬಾರಿಯೂ ಜಿಲ್ಲೆಯಲ್ಲಿ ಬರ ಇದ್ದು, ಎಲ್ಲ ತಾಲೂಕಿಗೆ ಪರಿಹಾರ ನೀಡಬೇಕು. ಈವರೆಗೂ ಇನ್ ಫುಟ್ ಸಬ್ಸಿಡಿ ಕೂಡ ತಲುಪಿಲ್ಲ. ಈ ಕುರಿತು ಪರಿಶೀಲಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ರೈತರ ಸಮಸ್ಯೆಗಳ ನಿಖರ ಮಾಹಿತಿ ನೀಡಿದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ನಿಯಮಾನುಸಾರ ರೈತರಿಗೆ 7 ಗಂಟೆ ವಿದ್ಯುತ್ ನೀಡಬೇಕು. ಈ ವರ್ಷ ಉತ್ತಮವಾಗಿ ಮಳೆ ಸುರಿದ ಕಾರಣ 10 ಗಂಟೆ ವಿದ್ಯುತ್ ನೀಡಬಹುದು. ನಾರಾಯಣಪುರ ಬಲದಂಡೆಯ 9ಎ ಕಾಲುವೆ ಕಾಮಗಾರಿ ತುರ್ತಾಗಿ ಮುಗಿಸಬೇಕು. ಭೂಮಾಪನ ಇಲಾಖೆಯಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿದ್ದು, ರೈತರಿಗೆ ವಂಚನೆಯಾಗುತ್ತಿದೆ. ಅಧಿಕಾರಿಗಳು ದೌರ್ಜನ್ಯ ಮಾಡುತ್ತಿದ್ದು, ಅಮಾಯಕ ರೈತರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ರೈತ ಮುಖಂಡ ಅಮರಣ್ಣ ಗುಡಿಹಾಳ, ಜಿಲ್ಲೆಯ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಎಡಿಸಿ ದುರಗೇಶ, ರಾಯಚೂರು ಎಸಿ ಸಂತೋಷ ಕಾಮಗೌಡ, ಜಿಪಂ ಉಪ ಕಾರ್ಯದರ್ಶಿ ಮಹ್ಮದ್ ಯೂಸೂಫ್. ಡಿಡಿಎಲ್‌ಆರ್ ರಾಜಣ್ಣ ಸೇರಿ ರೈತ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.