ಸಾಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಕೆಳದಿ ಹಿರೇಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇನ್ನಷ್ಟು ಹೂಳೆತ್ತುವ ಕಾಮಗಾರಿ ನಡೆಯಬೇಕಾಗಿರುವುದರಿಂದ ಸಾರ್ವಜನಿಕರು, ದಾನಿಗಳು ದೇಣಿಗೆ ನೀಡುವ ಮೂಲಕ ಅಂತರ್ಜಲ ಉಳಿಸುವ ಮಹತ್ವದ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ವಡ್ಡರ ತಿಮ್ಮವ್ವ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಂ. ಸತ್ಯನಾರಾಯಣ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಯೋಜನೆಯಡಿ ಕೆರೆ ಅಭಿವೃದ್ಧಿಗೆ 12.75 ಲಕ್ಷ ರೂ. ಅನುದಾನ ನೀಡಲಾಗಿದೆ. ಈಗಾಗಲೇ ಸುಮಾರು 24 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಇನ್ನೂ 25 ಲಕ್ಷ ರೂ. ಅಗತ್ಯವಿದೆ ಎಂದರು. ಕೆಳದಿ ಹಿರೇಕೆರೆ 108.20 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆ ಅಭಿವೃದ್ಧಿಗೆ ಕೆನರಾ ಬ್ಯಾಂಕ್‌ನಲ್ಲಿರಿಸಿದ ಹಣ, ಕೆರೆ ಒತ್ತುವರಿದಾರರನ್ನು ಬಿಡಿಸಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಬಂದ ಹಣ ಸೇರಿದಂತೆ ವಿವಿಧ ಮೂಲಗಳಿಂದ 16 ಎಕರೆ ಹೂಳು ತೆಗೆಸಲಾಗಿದೆ. 2010, 11, 12ರಲ್ಲಿ ಕೆರೆ ಕೋಡಿಗೆ ಸಿಮೆಂಟ್ ವಾಲ್, ಮೋರಿ, ಕಾಲುವೆ ನಿರ್ಮಾಣ, ಹೂಳೆತ್ತಲು ಸುಮಾರು 43 ಲಕ್ಷ ರೂ. ಖರ್ಚು ಮಾಡಲಾಗಿದೆ. ಕೆರೆಯಲ್ಲಿ ಮೀನು ಬೇಟೆ ಬಾಬ್ತು ಬಂದ 12 ಲಕ್ಷ ರೂ.ವನ್ನು ಸಹ ಹೂಳೆತ್ತಲು ಬಳಸಲಾಗಿದೆ ಎಂದರು.
ಕಾಗೋಡು ತಿಮ್ಮಪ್ಪನವರು 2014-15ರಲ್ಲಿ ಕೆರೆ ಅಭಿವೃದ್ಧಿಗೆ ಸರ್ಕಾರದಿಂದ 2 ಕೋಟಿ ರೂ., 2020-21ನೇ ಸಾಲಿನಲ್ಲಿ ಹಾಲಿ ಶಾಸಕ ಹಾಲಪ್ಪ ಹರತಾಳು 90 ಲಕ್ಷ ರೂ. ಅನುದಾನ ನೀಡಿದ್ದಾರೆ. ಕೆರೆಯಲ್ಲಿ ಇನ್ನೂ 15ರಿಂದ 20 ಎಕರೆ ಹೂಳು ತುಂಬಿರುವುದರಿಂದ ಸಾರ್ವಜನಿಕರ ಆರ್ಥಿಕ ಸಹಕಾರ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ 5 ಸಾವಿರ ರೂ. ಗಿಂತಲೂ ಅಧಿಕ ಹಣ ನೀಡಿದವರ ಹೆಸರನ್ನು ನಾಮಫಲಕದಲ್ಲಿ ಹಾಕಲಾಗುತ್ತದೆ. ದಾನಿಗಳು ಕೆಳದಿ ಕೆನರಾ ಬ್ಯಾಂಕ್ ಶಾಖೆಯ ಖಾತೆ ನಂ. 0583101017619ಕ್ಕೆ ಹಣ ಕಳಿಸಬಹುದು ಎಂದು ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಮೇಶ್ ಮಾತನಾಡಿ, ಕೆಳದಿ ಹಿರೇಕೆರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇನ್ನು 20 ಎಕರೆಯಷ್ಟು ಹೂಳು ಅಗತ್ಯವಾಗಿ ತೆಗೆಯಬೇಕಾಗಿರುವುದರಿಂದ ದಾನಿಗಳು ಧನ ಸಹಾಯ ಮಾಡುವ ಅಗತ್ಯವಿದೆ. ಇದರ ಜೊತೆಗೆ ಕೆರೆ ದಂಡೆಯಲ್ಲಿ ಬರುವ ಜಮೀನು ಮಾಲೀಕರಿಂದ ಸಹ ಎಕರೆಗೆ ಒಂದು ಸಾವಿರ ರೂ. ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಕೆ.ಆರ್. ದುರ್ಗಪ್ಪ, ಪ್ರಮುಖರಾದ ಮಹಾದೇವಪ್ಪ, ಕೆ.ವಿ. ಮಂಜಪ್ಪ, ರಮೇಶ್ ಕೆಳದಿ, ಶಾಂತರಾಜ ಜೈನ್, ಸುನೀಲ್ ಕುಮಾರ್, ಕೆ.ಆರ್. ನಾಗರಾಜ್, ಗೋಪಾಲಕೃಷ್ಣ, ಪ್ರಶಾಂತ್, ಕೆರೆಸ್ವಾಮಿ ಹಾಜರಿದ್ದರು.