ಕೆ.ಆರ್.ಪೇಟೆ: ರಾಯಸಮುದ್ರ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಕೇವಲ ಓರ್ವನನ್ನು ಬಂಧಿಸಿ, ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ಸುಳ್ಳು ವರದಿ ನೀಡಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲೂಕಿನ ರಾಯಸಮುದ್ರದಲ್ಲಿ ಕಳೆದ ತಿಂಗಳಲ್ಲಿ ದಂಪತಿ ಕೊಲೆ ನಡೆದಿತ್ತು. ಕೊಲೆಯಾದ ದಂಪತಿಗೆ ಎಲ್ಐಸಿ ಹಣ ಬಂದಿತ್ತು. ಅಲ್ಲದೆ, ಅವರು ಬಡ್ಡಿಗೆ ಕೊಡಲು ಹಣ ಕೂಡಿಟ್ಟಿದ್ದ ಹಿನ್ನೆಲೆಯಲ್ಲಿ ಈ ವಿಷಯ ತಿಳಿದವರು ಹಣದ ಆಸೆಯಿಂದಲೆ ಕೊಲೆ ಮಾಡಿದ್ದಾರೆಂದು ಕೊಲೆ ನಡೆದ ದಿನದಿಂದಲೂ ಆರೋಪಿಸುತ್ತಲೇ ಬಂದಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಹಣಕ್ಕಾಗಿ ಕೊಲೆ ನಡೆದಿಲ್ಲ. ಅವರು ವಿನಾಕಾರಣ ಇತರರೊಂದಿಗೆ ಜಗಳ ಮಾಡುತ್ತಿದ್ದರಿಂದ ಕೊಲೆ ನಡೆದಿದೆ. ಹಣಕ್ಕಾಗಿ ನಡೆದಿಲ್ಲ ಎಂದು ವರದಿ ನೀಡಿರುವ ಪೊಲೀಸರ ವಿರುದ್ಧ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.
ಸಿಪಿಐಗೆ ಮಹಿಳೆಯರಿಂದ ತರಾಟೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಕೊಲೆ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಸರ್ಕಲ್ ಇನ್ಸ್ ಪೆಕ್ಟರ್ ಸುಧಾಕರ್ ಅವರನ್ನು ಸುತ್ತುವರಿದ ಮಹಿಳೆಯರು ಕೊಲೆಗಾ ರರನ್ನು ನೀವು ರಕ್ಷಣೆ ಮಾಡುತ್ತಿರುವಿರಿ ಎಂದು ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕೊಲೆಗಾರರನ್ನು ನಮಗೆ ತೋರಿಸಿ. ಒಬ್ಬ ವ್ಯಕ್ತಿ ಇಬ್ಬರನ್ನು ಕೊಲೆ ಮಾಡಲು ಹೇಗೆ ಸಾಧ್ಯ. ನಾವು ಹತ್ಯೆಯಾದ ಮಹಿಳೆಯೆ ಮೈಮೇಲೆ ಚಿನ್ನಭರಣ ಇದ್ದದ್ದನ್ನು ಕಂಡಿದ್ದೇವೆ. ಈಗ ನಿಮ್ಮ ಸಿಬ್ಬಂದಿ ಇಲಿಗಳು ಒಡವೆಗಳನ್ನು ಕಚ್ಚಿಕೊಂಡು ಹೋಗಿವೆ ಎಂದು ತಮಾಷೆ ಮಾಡಿ ನಮ್ಮನ್ನೆ ಅಣಕಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಪೊಲೀಸರ ಮೇಲೆ ಅನುಮಾನ: ಗ್ರಾಮಸ್ಥರ ಮಾಹಿತಿಯಂತೆ ಕೊಲೆಯಾದ ಮಹಿಳೆ ಸಣ್ಣ ಪುಟ್ಟ ಕೈಸಾಲ ನೀಡಿ ಬಡ್ಡಿ ಹಣ ಪಡೆಯುತ್ತಿದ್ದರು. ಕೊಲೆಯಾಗುವುದಕ್ಕೆ ಕೆಲವು ದಿನಗಳ ಮುನ್ನ ಶೀಳನೆರೆ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಂಡು ಬಂದಿದ್ದು ಅವರು ಮನೆಯಲ್ಲಿ ಸುಮಾರು ನಾಲ್ಕು ಲಕ್ಷ ರೂ. ಇಟ್ಟಿದ್ದರು. ಆ ಹಣವನ್ನು ಕೊಲೆ ಆರೋಪಿ ಪತ್ನಿ ಸುಜಾತ ಲೆಕ್ಕ ಮಾಡಿ ಕೊಟ್ಟಿದ್ದು ಹಣ ಇರುವ ಬಗ್ಗೆ ತನ್ನ ಗಂಡನಿಗೆ ಮತ್ತು ಆಕೆಯ ಕೆಲ ಪುರುಷ ಸ್ನೇಹಿತರಿಗೆ ಮಾಹಿತಿ ನೀಡಿದ್ದಾಳೆ. ಅವಳ ಸೂಚನೆಯಂತೆ ನಾಲ್ಕರಿಂದ ಐವರ ತಂಡ ತಡರಾತ್ರಿ ಮನೆಗೆ ನುಗ್ಗಿ ದಂಪತಿಯನ್ನು ಹತ್ಯೆಮಾಡಿ ಹಣ ಮತ್ತು ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸ್ ತನಿಖೆಯಲ್ಲಿ ಆರೋಪಿ ಈ ಎಲ್ಲಾ ಮಾಹಿತಿಯನ್ನೂ ತಿಳಿಸಿದ್ದಾರೆ. ಅವರು ಕಳ್ಳತನ ಮಾಡಿರುವ ಚಿನ್ನಾಭರಣ ಹಾಗೂ ಹಣವನ್ನೂ ಪೊಲೀಸರಿಗೆ ವಾಪಸ್ ನೀಡಿದ್ದಾರೆ. ಇದರ ಜೊತೆಗೆ ಮತ್ತಷ್ಟು ಹಣ ನೀಡಿ ಕೆಲವರ ಹೆಸರನ್ನು ಕೊಲೆ ಆರೋಪಿಗಳ ಪಟ್ಟಿಗೆ ಸೇರಿಸದಂತೆ ನೋಡಿಕೊಂಡಿದ್ದಾರೆ ಎಂದು ಗ್ರಾಮಸ್ಥರ ಆರೋಸಿದರು.
ಪೊಲೀಸ್ ಅಧಿಕಾರಿಗಳು ದಡ್ಡರಲ್ಲ, ಉದ್ದೇಶ ಪೂರಕವಾಗಿಯೇ ಒತ್ತಡ ಹಾಗೂ ಹಣದ ಆಸೆಯಿಂದ ಸುಳ್ಳು ಮಾಹಿತಿ ನೀಡಿ ಸತ್ಯಾಂಶ ಮರೆಮಾಚುತ್ತಿದ್ದಾರೆ. ಕೊಲೆಗಾರರನ್ನು ರಕ್ಷಣೆ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳ ನಡೆ ಮೇಲೆಯೇ ಅನುಮಾನ ಮೂಡುತ್ತಿದ್ದು, ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಮಂಪರು ಪರೀಕ್ಷೆ ನಡೆಸುವ ಜೊತೆಗೆ ಬೇರೆ ಅಧಿಕಾರಿಗಳಿಂದ ಜೋಡಿಕೊಲೆ ತನಿಖೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.