ಸುರಪುರ: ತಾಲೂಕಿನ ಹೊಂಬಳಕಲ್ ಮತ್ತು ಮಂಜಲಾಪುರ ಹಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಸಿ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.
ಸಮಿತಿ ತಾಲೂಕು ಸಂಚಾಲಕ ಮಾನಪ್ಪ ಶೆಳ್ಳಗಿ ಮಾತನಾಡಿ, ಹುಣಸಗಿ ತಾಲೂಕಿನ ಹೊಂಬಳಕಲ್ ಗ್ರಾಮದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅದೇ ಗ್ರಾಮದ ಯುವಕ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರ ಬಹಿರಂಗ ಪಡಿಸಿದಲ್ಲಿ ಜೀವ ಸಹಿತಿ ಉಳಿಸುವುದಿಲ್ಲ ಎಂದು ಬಾಲಕಿಯ ಕಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿದರು.
ಘಟನೆಗೆ ಸಂಬಂಧಿಸಿದಂತೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದು ಒಂದು ತಿಂಗಳಾಗಿದ್ದರೂ ಕೂಡ ಪೊಲೀಸರು ಇದುವರೆಗೂ ಆರೋಪಿಯನ್ನು ಬಂಧಿಸುತ್ತಿಲ್ಲ. ಆರೋಪಿಯನ್ನು ಬಂಧಿಸುವಂತೆ ಬಾಲಕಿಯ ಕಟುಂಬದವರು ಮನವಿ ಮಾಡಿದರೆ ರಾಜಕೀಯ ಒತ್ತಡದಿಂದ ಪೊಲೀಸರು ಆರೋಪಿಯನ್ನು ಬಂಧಿಸುತ್ತಿಲ್ಲ ಎಂದು ಆರೋಪಿಸಿದರು.
ತಾಲೂಕಿನಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿವೆ. ದಲಿತರಿಗೆ ರಕ್ಷಣೆ ಇಲ್ಲವಾಗಿದೆ. ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ದಲಿತರಿಗೆ ರಕ್ಷಣೆ ಕೊಡುವುದರೊಂದಿಗೆ ನ್ಯಾಯ ಒದಗಿಸಿಕೊಡಲು ಪೊಲೀಸ್ ಇಲಾಖೆ ದಿಟ್ಟ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಸೆ. 4ರಂದು ರಸ್ತೆ ತಡೆಯೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಮನವಿಯನ್ನು ಹಿರಿಯ ಶಿರಸ್ತೇದಾರ್ ನಜೀರಸಾಹೇಬ ಅವರಿಗೆ ನೀಡಿದರು.
ಮಾನಪ್ಪ ಬಿಜಾಸ್ಪೂರ, ಮರೆಪ್ಪ ಹಾಲಗೇರಾ, ಮರಿಲಿಂಗಪ್ಪ ಹುಣಸಿ ಹೊಳೆ, ಜೆಟ್ಟೆಪ್ಪ ನಾಗರಾಳ, ಬಸವರಾಜ ಕಲ್ಲದೇವನಳ್ಳಿ, ಶೇಖಪ್ಪ ಬಂಡಾರೆ, ಬಸಪ್ಪ ಅಗತೀರ್ಥ ಇದ್ದರು.