ಚಿತ್ರದುರ್ಗ: ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ನೀರಿನ ಸಮಸ್ಯೆ ಕಾಡುತ್ತಿದೆ. ನಗರದಲ್ಲಿ ಯಾವ ರಸ್ತೆಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಾಜಕಾರಣಿಗಳು ಅವರವರ ಹಂತದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಮಾಡಬಹುದು. ಉಳಿದಂತೆ ಜಿಲ್ಲಾಡಳಿತಕ್ಕೆ ಹೆಚ್ಚಿನ ಅಧಿಕಾರವಿರುವುದರಿಂದ ಅಧೀನ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಸೂಚಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಅವರು ನೂತನ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯ ಜೋತ್ಸ್ನಾ ಅವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿಯವರಿಗೆ ಹೂಗುತ್ಛ ನೀಡಿ ಅಭಿನಂದಿಸಿ ಮಾತನಾಡಿದ ನವೀನ್, ಮಳೆ ಬೆಳೆ ಇಲ್ಲದೆ ಸತತ ಐದಾರು ವರ್ಷಗಳಿಂದಲೂ ರೈತರು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೂ ಅಭಾವವಿದೆ. ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವು, ನೀರು ಒದಗಿಸುವುದು ದೊಡ್ಡ ಸವಾಲಾಗಿದೆ.
ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಒಂದೊಂದೇ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜೈಪಾಲ್, ಕೋಶಾಧ್ಯಕ್ಷ ಎಚ್.ಬಿ.ನರೇಂದ್ರ, ಅಭಿಲಾಷ್ ಇದ್ದರು.
ಕಾರ್ಮಿಕರ ಮನವಿ: ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಮರಳಿಗೆ ತೀವ್ರ ಅಭಾವವಿರುವುದರಿಂದ ಕಟ್ಟಡ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಕುಟುಂಬಗಳು ಬೀದಿಪಾಲಾಗುವ ಹಂತಕ್ಕೆ ತಲುಪಿವೆ. ಅಕ್ರಮವಾಗಿ ಮರಳು ಹೊರಗೆ ಕಳ್ಳಸಾಗಾಣೆಯಾಗುವುದನ್ನು ನಿಯಂತ್ರಿಸಿ ಜಿಲ್ಲೆಯ ಕಟ್ಟಡ ಕಾರ್ಮಿಕರಿಗೆ ಮರಳು ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಎಚ್. ಹಾಲೇಶಪ್ಪ, ಕಾರ್ಯದರ್ಶಿ ಲಕ್ಷ್ಮಿದೇವಿ, ಜಾವಿದ್ ಭಾಷಾ, ಚಂದ್ರಮ್ಮ, ಪ್ರಧಾನ ಕಾರ್ಯದರ್ಶಿ ಜೆ.ಎಂ. ರಾಜ, ಖಜಾಂಚಿ ಟಿ. ಅಶೋಕ್ ಇದ್ದರು.