ಚಿಂಚೋಳಿ: ಕಳೆದ ಆರು ವರ್ಷದಿಂದ ಮೇಲಿಂದ ಮೇಲೆ ಭೂಮಿ ಕಂಪಿಸುತ್ತಿರುವುದರಿಂದ ನಾವೆಲ್ಲ ಭಯಗೊಂಡಿದ್ದು, ಸರ್ಕಾರದಿಂದ ಮನೆ ಎದುರು ಶೆಡ್‌ಗಳನ್ನು ನಿರ್ಮಿಸಿಕೊಟ್ಟರೆ ಪ್ರಾಣ ರಕ್ಷಣೆಗೆ ಅನುಕೂಲವಾಗುತ್ತದೆ ಎಂದು ಕಲಬುರಗಿ ಪ್ರಾದೇಶಿಕ ಆಯುಕ್ತ ಡಾ| ಎನ್.ವಿ. ಪ್ರಸಾದ ಎದುರು ಗಡಿಕೇಶ್ವಾರ ಗ್ರಾಮಸ್ಥರು ಅಳಲು ತೋಡಿಕೊಂಡರು.
ಶನಿವಾರ ಅವರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಾದ ರೇವಣಸಿದ್ಧಪ್ಪ ಅಣಕಲ್, ಪ್ರಕಾಶ ರಂಗನೂರ, ವಿರೇಶ ರೆಮ್ಮಣಿ, ನಾಗರಾಜ ಚಕ್ರವರ್ತಿ ಮಾತನಾಡಿ, ಗಡಿಕೇಶ್ವಾರ ಗ್ರಾಮದಲ್ಲಿ ಕಳೆದ ಆರು ವರ್ಷಗಳಿಂದ ಭೂಮಿ ಕಂಪಿಸುತ್ತಿದೆ. ಇದರಿಂದ ಅನೇಕ ಮನೆಗಳು ಬಿರುಕುಬಿಟ್ಟಿವೆ. ಕೆಲವರ ಮನೆಗಳು ಬಿದ್ದಿವೆ. ಇನ್ನು ಕೆಲವರು ಗ್ರಾಮವನ್ನೇ ತೊರೆದಿದ್ದಾರೆ ಎಂದು ಹೇಳಿದರು.
ಕೆರೋಳಿ, ಬೆನಕನಳ್ಳಿ, ಕೊರವಿ, ಹಲಚೇರಾ, ತೇಗಲತಿಪ್ಪಿ, ಹೊಸಳ್ಳಿ, ರಾಮನಗರ ತಾಂಡಾ, ಕುಪನೂರ, ಬಂಟನಳ್ಳಿ, ರುದನೂರ, ರಾಯಕೋಡ, ಚಿಂತಪಳ್ಳಿ, ಭೂತಪುರ ಗ್ರಾಮಗಳಲ್ಲಿ ಅನೇಕ ಸಲ ಭಾರಿ ಶಬ್ದ ಕೇಳಿಬಂದಿದೆ. ಆದ್ದರಿಂದ ಕೂಡಲೇ ಈ ಗ್ರಾಮಗಳಲ್ಲಿ ಮನೆ ಎದುರು ಶೆಡ್ ನಿರ್ಮಿಸಿಕೊಡಿ ಎಂದು ಮನವಿ ಮಾಡಿದರು. ಗಡಿಕೇಶ್ವಾರದಲ್ಲಿ ಭೂಕಂಪದ ತೀವ್ರತೆ ಗುರುತಿಸಲು ಸಿಸ್ಮೋ ಮೀಟರ್ ಅಳವಡಿಸಲಾಗಿದೆ. ಆದರೆ ಭೂಕಂಪವಾದಾಗ ಅದರ ತೀವ್ರತೆ ಕುರಿತು ನಮಗೆ ಮಾಹಿತಿ ನೀಡುತ್ತಿಲ್ಲ. ಅಲ್ಲದೇ ಗಡಿಕೇಶ್ವಾರ, ಹೊಸಳ್ಳಿ, ರಾಮನಗರ ತಾಂಡಾದಲ್ಲಿ ಮಾತ್ರ ಕಾಳಜಿ ಕೇಂದ್ರ ಪ್ರಾರಂಭಿಸಲಾಗಿದೆ. ಇನ್ನುಳಿದ ಗ್ರಾಮಗಳನ್ನು ಪರಿಗಣಿಸಿ ಅಲ್ಲಿಯೂ ಕಾಳಜಿ ಕೇಖದ್ರ ಆರಂಭಿಸಬೇಕು ಎಂದು ಮುಖಂಡರಾದ ಸುರೇಶ ಪಾಟೀಲ ರಾಯಕೋಡ, ಕಾಶಿನಾಥ ಪೂಜಾರಿ, ವೀರೇಶ ರೆಮ್ಮಣಿ ಮತ್ತಿತರರು ಆಗ್ರಹಿಸಿದರು.
ಇದನ್ನೂ ಓದಿ:ಮಂಗಳವಾರ ಹಾಲು-ತುಪ್ಪ ಕಾರ್ಯ : ಕಂಠೀರವ ಸ್ಟುಡಿಯೋ ಸುತ್ತ ಸೆಕ್ಷನ್ 144
ಮನೆಬಿದ್ದ ಸ್ಥಳಕ್ಕೆ ಆಯುಕ್ತರ ಭೇಟಿ
ಭೂಕಂಪದಿಂದ ಮನೆಗಳು ಬಿದ್ದಿರುವ ಮತ್ತು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಕುರಿತು ಆಯುಕ್ತರು ಪರಿಶೀಲಿಸಿದರು. ನಂತರ ತಾಲೂಕುಮಟ್ಟದ ಅಧಿಕಾರಿಗಳ ಸಭೆಯನ್ನು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಸಿ, ಭೂಕಂಪದ ಕುರಿತು ಮಾಹಿತಿ ಪಡೆದುಕೊಂಡರು. ಸಹಾಯಕ ಆಯುಕ್ತೆ ಅಶ್ವಿಜಾ, ತಹಶೀಲ್ದಾರ್ ಅಂಜುಮ ತಬುÕಮ್, ತಾಪಂ ಅಧಿಕಾರಿ ಅನಿಲಕುಮಾರ ರಾಠೊಡ, ಎಇಇ ಗುರುರಾಜ ಜೋಶಿ, ಎಇಇ ಸಿದ್ರಾಮ ದಂಡಗುಲಕರ, ಎಇಇ ಮಹ್ಮದ್ ಅಹೆಮದ್ ಹುಸೇನ, ಡಾ| ಜಗದೀಶ್ವರ ಬುಳ್ಳ, ಡಾ| ಅಜೀತ್ ಪಾಟೀಲ, ಸಿಡಿಪಿಒ ಗುರುಪ್ರಸಾದ ಕವಿತಾಳ, ಎಇಇ ವೀರೇಂದ್ರ ಚವ್ಹಾಣ ಇನ್ನಿತರರಿದ್ದರು.