ಹೊಸೂರು: ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯ ಪುನರ್ ಆರಂಭಕ್ಕೆ ಕ್ರಮಕೈಗೊಳ್ಳಬೇಕು ಮತ್ತು 2017 ನೇ ಸಾಲಿನ ಪ್ರತಿ ಟನ್ ಕಬ್ಬಿನ ದರವನ್ನು 3350 ರೂಗಳಿಗೆ ನಿಗದಿ ಪಡಿಸುವಂತೆ ಕೆ.ಆರ್.ನಗರ ತಾಲೂಕು ಕಬ್ಬು ಬೆಳೆಗಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಿದೆ.
ಮೈಸೂರಿನ ಮುಖ್ಯಮಂತ್ರಿ ನಿವಾಸದಲ್ಲಿ ಭೇಟಿ ಮಾಡಿದ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಹಳೆಮಿರ್ಲೆ ಸುನಯ್ ಗೌಡ ಮತ್ತು ಸಂಘದ ಪದಾಧಿಕಾರಿಗಳು, ಸಂಘದ ವತಿಯಿಂದ ಈ ಕಾರ್ಖಾನೆಯ ಆರಂಭಕ್ಕೆ 13 ದಿನಗಳ ಕಾಲ ತಾಲೂಕು ಕಚೇರಿಯ ಎದುರು ಉಪವಾಸ ಸತ್ಯಗ್ರಹ ನಡೆಸಿದರೂ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕರ ವೇತನ ನೀಡಿ: ಕಳೆದ 4 ವರ್ಷಗಳಿಂದ ಈ ಕಾರ್ಖಾನೆಯು ಆರಂಭವಾಗದೇ ರೈತರು ಮತ್ತು ಕಾರ್ಮಿಕರು ತೊಂದರೆ ಎದುರಿಸುತ್ತಿದ್ದಾರೆ. ಜಿಲ್ಲೆಯ ಸಹಕಾರಿ ಸಕ್ಕರೆ ಕಾರ್ಖಾನೆಯ ಉಳಿವಿಗೆ ಮುಂದಾಗುವ ಮೂಲಕ ಕಾರ್ಮಿಕರಿಗೆ ನೀಡಬೇಕಾದ 14 ಕೋಟಿ ವೇತನವನ್ನು ನೀಡಲು ಮುಂದಾಗ ಬೇಕು ಎಂದು ಆಗ್ರಹಿಸಿದರು.
2015-16 ಮತ್ತು 2016-17 ನೇ ಸಾಲಿನ ಕಬ್ಬು ಸಾಗಾಣಿಕೆಯ ವೆಚ್ಚವನ್ನು ರೈತರಿಗೆ ಕೊಡಿಸಬೇಕು ಎಂದರಲ್ಲದೇ, ಬೆಳೆಯ ವಿಮೆಯ ಕಂತನ್ನು ಬಿತ್ತನೆ ಬೀಜ ನೀಡುವ ಬೀಜದ ದರದೊಂದಿಗೆ ವಿಮಾಕಂತನ್ನು ಪಡೆದು ಅಧಿಕಾರಿಗಳೇ ಬ್ಯಾಂಕ್‌ಗಳಿಗೆ ಜಮಾ ಮಾಡುವಂತೆ ಒತ್ತಾಯಿಸಿದರು.
ಸಾಲ ವಸೂಲು ನಿಲ್ಲಿಸಿ: ರೈತರು ಆಳವಡಿಸಿಕೊಂಡಿರುವ ಪಂಪ್‌ಸೆಟ್‌ಗಳಿಗೆ ಸರ್ವಿಸ್ ಚಾರ್ಜ್ ಜತಗೆ 10 ಸಾವಿರ ರೂಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಾತಿ ಮಾಡುತ್ತಿದ್ದು, ಇದನ್ನು ನಿಲ್ಲಿಸಿ ಮೀಟರ್ ಆಳವಡಿಸಿ ಕೊಳ್ಳುವಂತೆ ಒತ್ತಾಯ ಮಾಡುತ್ತಿರುವುದನ್ನು ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರಿಂದ ಬಲವಂತವಾಗಿ ಸಾಲ ವಸೂಲಾತಿಗೆ ಒತ್ತಡ ತರುತ್ತಿದ್ದು ಇದನ್ನು ತಕ್ಷಣವೇ ನಿಲ್ಲಿಸ ಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಹೆಚ್.ಎಸ್.ವಿಶ್ವಾಸ್, ಉಪಾಧ್ಯಕ್ಷ ಕಂಚಗಾರಕೊಪ್ಪಲು ಶಿವು, ಖಜಾಂಚಿ ಲಕ್ಷ್ಮೀನಾರಾಯಣ್, ರೈತ ಮುಖಂಡರಾದ ಹೊಸ ಆಗ್ರಹಾರ ರುದ್ರೇಶ್, ಎಂ.ಎಸ್.ರಾಜೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪರಿಶೀಲನೆ ನಡೆಸಿ ನಿಗದಿ: ರೈತರ ಮನವಿಗೆ ಪ್ರತಿಕ್ರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕಾರ್ಖಾನೆಯನ್ನು ಖಾಸಗಿವರಿಗೆ ಗುತ್ತಿಗೆ ನೀಡಲು, ಕಾರ್ಮಿಕರಿಗೆ ವೇತನ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಜತೆಗೆ ಕಬ್ಬಿನ ದರವನ್ನು ಪರಿಶೀಲನೆ ನಡೆಸಿ ನಿಗದಿ ಪಡಿಸಲಾಗುವುದು ಜತಗೆ ಸಾಗಾಣಿಕೆಯ ವೆಚ್ಚವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರಲ್ಲದೇ, ಮೀಟರ್ ಆಳವಡಿಕೆಯ ಸಂಬಂಧ ಇಂಧನ ಇಲಾಖೆಯೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.