ಹಾವೇರಿ: ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರಿಗೆ ಹಾಗೂ ಸಿಬ್ಬಂದಿಗೆ ಸಹಾಯಧನ ವಿತರಣೆ, ವಿದ್ಯಾಗಮ ಯೋಜನೆಯಡಿಬರುವ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರನ್ನು ಸಹ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಲು ಒತ್ತಾಯಿಸಿ ಜಿಲ್ಲಾ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಸ್ಥೆಯ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಶೇ.49 ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸರ್ಕಾರ ಇದುವರೆಗೂ ಯಾವುದೇ ಆರ್ಥಿಕ ಸಹಾಯಧನ ಘೋಷಿಸದಿರುವುದು ವಿಷಾದನೀಯ.
ಕೋವಿಡ್-19 ಸಮಸ್ಯೆಯಿಂದ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿನ ಸುಮಾರು 4-5 ಲಕ್ಷ ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಕೂಡಲೇ ಸರ್ಕಾರ ಮಾಸಿಕ 10 ಸಾವಿರ ರೂ. ಗೌರವಧನ ನೀಡಬೇಕು. ವಿದ್ಯಾಗಮ ಯೋಜನೆ ಅಡಿ ಸೇವೆ ಸಲ್ಲಿಸುತ್ತಿರುವ ಅನುದಾನರಹಿತ, ಅನುದಾನಿತಹಾಗೂ ಸರ್ಕಾರಿ ಶಾಲಾ ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಕೋವಿಡ್-19 ವಾರಿರ್ಸ್ ಗೆ ನೀಡುವ ಪರಿಹಾರವನ್ನು ಈ ಶಿಕ್ಷಕ ಸಮುದಾಯಕ್ಕೂ ನೀಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ರಾಜ್ಯದಲ್ಲಿ ಸುಮಾರು 100ಕ್ಕೂ ಹೆಚ್ಚು ಶಿಕ್ಷಕರು ವಿದ್ಯಾಗಮ ಯೋಜನೆ ಅಡಿ ಪಾಠ ಮಾಡಲು ಹೋಗಿ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ. ಮೃತಪಟ್ಟ ಶಿಕ್ಷಕರ ಕುಟುಂಬಗಳು ಸಂಕಷ್ಟದಲ್ಲಿದ್ದು, ಈ ಕೂಡಲೇ ಸರ್ಕಾರ ಖಾಸಗಿ ಅನುದಾನ ರಹಿತ ಶಾಲೆಯವರ ಮನವಿಗೆ ಸ್ಪಂದಿಸಿ ಸಹಾಯಧನ ನೀಡಬೇಕು ಎಂದರು.
2020-21ನೇ ಸಾಲಿನ ವಾರ್ಷಿಕ ಪಠ್ಯಕ್ರಮ ಮತ್ತು ವೇಳಾಪಟ್ಟಿಯನ್ನು ನಿಗಪಡಿಸದೇ ಇರುವುದರಿಂದ ಕೂಡಲೇ ನಿಗದಿಪಡಿಸಲು ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. 2018-19 ಮತ್ತು 2019-20ನೇ ಸಾಲಿನ ಆರ್‌ಟಿಇ ಬಾಕಿ ಉಳಿದ ಹಣವನ್ನು ಈ ಕೂಡಲೇ ಮಂಜೂರು ಮಾಡಿ ಈ ವರ್ಷದ 2020-21ನೇ ಸಾಲಿನ ಸರ್ಕಾರ ನೀಡಬೇಕಾದ ವಿದ್ಯಾರ್ಥಿಗಳ ಆರ್ ಟಿಇ ಶುಲ್ಕವನ್ನು ತಕ್ಷಣವೇ ಮಂಜೂರು ಮಾಡಬೇಕು. ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸರ್ಕಾರದಿಂದ ಶಾಲೆ ಪ್ರಾರಂಭದ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅನುದಾನ ರಹಿತಖಾಸಗಿ ಶಿಕ್ಷಣ ಸಂಸ್ಥೆಗಳ ಸಂಸ್ಥೆಯ ಜಿಲ್ಲಾಧ್ಯಕ್ಷ ಉಮೇಶ ಗುರುಲಿಂಗಪ್ಪಗೌಡ್ರ, ಪ್ರಧಾನಕಾರ್ಯದರ್ಶಿ ನಾಗೇಂದ್ರ ಕಟಕೋಳ, ರಾಜೀವ ಮಾಗಾವಿ, ಬಸವರಾಜ ತೋಟಗೇರ, ಮಲ್ಲೇಶಪ್ಪ ದೇಶಗತ್ತಿ ಇತರರು ಇದ್ದರು.