ಸಾಗರ: ಶಾಸಕ ಹಾಲಪ್ಪ ಹರತಾಳು ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಅರುಣ್ ಕುಗ್ವೆಯನ್ನು ಬಂಧಿಸುವಂತೆ ಒತ್ತಾಯಿಸಿ ಭಾನುವಾರ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಎಎಸ್‌ಪಿ ರೋಹನ್ ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೇಳೂರು, ಸಾಗರದಲ್ಲಿ ರೌಡಿಸಂನಂತಹ ಪ್ರಕರಣಗಳು ಹೆಚ್ಚುತ್ತಿದೆ. ಅರುಣ್ ಕುಗ್ವೆ ಅನೇಕ ಹೊಡೆದಾಟ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾನೆ. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಗಲಾಟೆ ಸಂದರ್ಭದಲ್ಲಿ ಬ್ರಾಹ್ಮಣ ಮತ್ತು ಲಿಂಗಾಯಿತ ಮುಖಂಡರ ಹಲ್ಲೆ ನಡೆಸಿದವರಲ್ಲಿ ಅರುಣ ಕುಗ್ವೆ ಪ್ರಮುಖವಾಗಿರುವುದರ ವಿಡಿಯೋಗಳಿವೆ. ಈತನಕ ಎಂಡಿಎಫ್ ಗಲಾಟೆಗೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಅರುಣ ಕುಗ್ವೆಗೆ ಶಾಸಕ ಹಾಲಪ್ಪ ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಹಿಂದಿನಿಂದಲೂ ನಡೆದ ಹಲವು ಹಲ್ಲೆ ಪ್ರಕರಣಗಳು ಶಾಸಕರ ಪ್ರಭಾವದಿಂದ ಮುಚ್ಚಿ ಹಾಕಲಾಗಿದೆ. ಶಾಸಕರು ಹಿಂದೆ ತಮ್ಮ ಕಡೆಯವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸ್ಟೇಷನ್ ಎದುರು ಧರಣಿ ನಡೆಸಿದ್ದರು. ಈಗ ಆಸ್ಪತ್ರೆಯೊಳಗೆ ಹೋಗಿ ಮನೋಜ್ ಕುಗ್ವೆ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಅರುಣ್ ಕುಗ್ವೆ ಮೇಲೆ ಸಾಕಷ್ಟು ದೂರುಗಳು ಇರುವುದರಿಂದ ಬಂಧಿಸಿ, ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಪೊಲೀಸರ ಕೈಯಲ್ಲಿ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗದೆ ಇದ್ದಲ್ಲಿ ನಮಗೆ ಹೇಳಿ ನಾವೇ ಬುದ್ದಿ ಕಲಿಸುತ್ತೇವೆ. ತಕ್ಷಣ ಕಾನೂನು ಕ್ರಮ ಜರುಗಿಸದೇ ಹೋದಲ್ಲಿ ಡಿವೈಎಸ್‌ಪಿ ಕಚೇರಿ ಎದುರು ಉಪವಾಸ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಬೇಳೂರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಅನಿತಾಕುಮಾರಿ, ರವಿಕುಗ್ವೆ, ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಪ್ರಮುಖರಾದ ಮಹಾಬಲ ಕೌತಿ, ತಾರಾಮೂರ್ತಿ, ಯಶವಂತ ಪಣಿ, ಅಶೋಕ್ ಬೇಳೂರು, ಅನ್ವರ್, ವಿ.ಶಂಕರ್, ಬಸವರಾಜ್ ಸೈದೂರು, ಪ್ರವೀಣ ಬಣಕಾರ್, ರಮೇಶ್ ಚಂದ್ರಗುತ್ತಿ, ಕಬೀರ್ ಚಿಪ್ಳಿ ಇನ್ನಿತರರು ಹಾಜರಿದ್ದರು.