ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರಭಾವಿಗಳಾಗಿದ್ದು, ಮತದಾನ ದಿನದಂದು ಕನಕಪುರದಲ್ಲಿ ಕಾಂಗ್ರೆಸ್ ಮತದಾರರು ಹೊರತುಪಡಿಸಿ ಉಳಿದವರು ಮತಗಟ್ಟೆಗೆ ಬರುವ ವಾತಾವರಣವಿಲ್ಲ ಎಂದು ಬಿಜೆಪಿ ಆರೋಪಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಜ್ಯ ಬಿಜೆಪಿ ಸಹ ವಕ್ತಾರರಾದ ಎ.ಎಚ್.ಆನಂದ್, ಎಸ್.ಪ್ರಕಾಶ್, ಮಾಜಿ ಉಪಮೇಯರ್ ಎಸ್.ಹರೀಶ್, ಬಿಜೆಪಿ ಮಾಧ್ಯಮ ಸಹ ಸಂಚಾಲಕ ಬಿ.ಎನ್.ರಾಘವೇಂದ್ರ, ರಾಜ್ಯ ಬಿಜೆಪಿ ಚುನಾವಣಾ ಪ್ರಕೋಷ್ಠದ ಸಂಚಾಲಕ ದತ್ತಗುರು ಹೆಗಡೆ, ಮುಖಂಡರಾದ ಗಣೇಶ್ ಕೃಷ್ಣಮೂರ್ತಿ, ಬಾಲಾಜಿ ಇತರರು ಸೋಮವಾರ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಹಾಲಿ ಸಂಸದರು ಹಾಗೂ ಸಚಿವರ ತೋಳ್ಬಲ, ಹಣಬಲದಿಂದ ಕನಕಪುರದಲ್ಲಿ ಜನತೆ ಮತದಾನದ ದಿನ ಹೊರಬರಲು ಭಯ ಪಡುತ್ತಿದ್ದಾರೆ. ಹಾಗಾಗಿ ಕನಕಪುರ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಿ, ಪ್ರತಿಯೊಬ್ಬ ಮತದಾರರು ಏ.18ರಂದು ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ಮತಗಟ್ಟೆಯಲ್ಲಿ ಸಿಸಿಟಿವಿ ಕ್ಯಾಮೆರಾ, ಸೂಕ್ತ ಭದ್ರತಾ ಪಡೆಗಳನ್ನು ನಿಯೋಜಿಸಬೇಕು ಎಂದು ನಿಯೋಗ ಮನವಿ ಮಾಡಿದೆ.
ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣಗೌಡ ಅವರು ಇತ್ತೀಚೆಗೆ ಕನಕಪುರ ಭಾಗದಲ್ಲಿ ಪ್ರಚಾರ ನಡೆಸುವಾಗ ಕಲ್ಲು ಎಸೆಯುವುದು, ಧಿಕ್ಕಾರ ಕೂಗಿ ಪ್ರಚಾರಕ್ಕೆ ಅಡ್ಡಿಪಡಿಸುವ ಘಟನೆಗಳು ನಡೆದಿವೆ. ಹಾಗಾಗಿ ಕನಕಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳನ್ನು ಸೂಕ್ಷ್ಮವೆಂದು ಘೋಷಿಸಿ ಭದ್ರತೆ ಒದಗಿಸಬೇಕು. ಜತೆಗೆ ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಬೂತ್‌ಸಂಖ್ಯೆ 471, 472, 473, 474, 475, 476ರಲ್ಲಿ ಕಾಂಗ್ರೆಸ್ಸಿಗರು ಬಿಜೆಪಿ ಪ್ರತಿನಿಧಿಗಳನ್ನು ಮತಗಟ್ಟೆಗಳಲ್ಲಿ ಕೂರಿಸಲು ಅವಕಾಶ ಕಲ್ಪಿಸದಂತಹ ವಾತಾವರಣ ನಿರ್ಮಿಸಿದ್ದು, ಈ ಬಗ್ಗೆಯೂ ದೂರು ನೀಡಲಾಗಿದೆ ಎಂದು ಎಸ್.ಪ್ರಕಾಶ್ ತಿಳಿಸಿದರು.