ಬೆಂಗಳೂರು: ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದ ವೇತನ ಶೇ.30ರಷ್ಟು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಮಾಡಬೇಕು ಎಂದು ಖಾಸಗಿ ಮತ್ತು ಅಲ್ಪಸಂಖ್ಯಾತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮನವಿ ಮಾಡಿವೆ. ಆದರೆ, ಈ ಬಗ್ಗೆ ಯಾವುದೇ ನಿರ್ಧಾರ
ಕೈಗೊಂಡಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಸೋಮವಾರ ಖಾಸಗಿ/ಅಲ್ಪಸಂಖ್ಯಾತರ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಸಭೆಯಲ್ಲಿ ಪ್ರತಿನಿಧಿಗಳ ಅಭಿಪ್ರಾಯ ಆಲಿಸಲಾಗಿದೆ. ಖಾಸಗಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಂತೆ ಡೀಮ್ಡ್ ವಿವಿಗಳೂ ವೈದ್ಯಕೀಯ ಶಿಕ್ಷಣ ನೀಡುತ್ತಿದ್ದು, ಶುಲ್ಕದಲ್ಲಿ ತಾರತಮ್ಯ ತೋರುವುದು ಸರಿಯಲ್ಲ.
ಬುಧವಾರ ಡೀಮ್ಡ್ ವೈದ್ಯಕೀಯ ವಿವಿಗಳ ಪದಾಧಿಕಾರಿಗಳ ಸಭೆ ನಡೆಯಲಿದ್ದು, ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ 6 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಭಾರತೀಯ ವೈದ್ಯ ಮಂಡಳಿ ಅನುಮತಿ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈದ್ಯಕೀಯ ಕಾಲೇಜುಗಳು ಹಾಗೂ ಸೀಟು ಕೈತಪ್ಪಲು ಅವಕಾಶ ನೀಡುವುದಿಲ್ಲ.
ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು. ಸದ್ಯ ಖಾಸಗಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕೋಟಾದ ಎಂಬಿಬಿಎಸ್ ಪದವಿ ಸೀಟಿನ ಶುಲ್ಕ 6.60 ಲಕ್ಷ ರೂ. ಸರ್ಕಾರಿ ಕೋಟಾದಡಿ ಸೀಟಿನ ಶುಲ್ಕ 4.40 ಲಕ್ಷ ರೂ.ಇದೆ. ದಂತ ವೈದ್ಯಕೀಯ ವಿಭಾಗದಲ್ಲಿ ಸಂಸ್ಥೆಗಳ ಕೋಟಾದಡಿ ಸೀಟಿನ ಶುಲ್ಕ 3.52 ಲಕ್ಷ ರೂ. ಸರ್ಕಾರಿ ಕೋಟಾದಡಿ ಸೀಟಿನ ಶುಲ್ಕ 2.25 ಲಕ್ಷ ರ .ನಿಗದಿಯಾಗಿದೆ.