Advertisement

ದೇಶದ ದಿಶೆ ಬದಲಿಸಿದ ಗಣರಾಜ್ಯ ದಿನ!

10:04 AM Jan 26, 2020 | mahesh |

ಭಾರತವು ಸಂವಿಧಾನವನ್ನು ಅಳವಡಿಸಿಕೊಂಡು, ಗಣರಾಜ್ಯವಾಗಿ ಇದೇ ಜನವರಿ 26ಕ್ಕೆ 71 ವರ್ಷಗಳಾಗಲಿವೆ. ಸ್ವಾತಂತ್ರ್ಯೋತ್ಸವದಷ್ಟೇ ಮುಖ್ಯವಾದ ಈ ದಿನವು ಕೇವಲ ಮತ್ತೂಂದು ಸರ್ಕಾರಿ ರಜಾ ದಿನವೆಂಬ ಭಾವನೆ ಜನಮಾನಸದಿಂದ ದೂರವಾಗಬೇಕಿದೆ. ಭಾರತವನ್ನು ಗಣರಾಜ್ಯವಾಗಿಸಲು ನಮ್ಮ ಹಿರಿಯರು ಪಟ್ಟ ಶ್ರಮ ಅಪಾರ. ಅದರಲ್ಲೂ ಸಂವಿಧಾನವೆಂಬ ಭದ್ರಬುನಾದಿಯ ಮೇಲೆ
ನವ ಭಾರತದ ರಚನೆಯನ್ನು ಆರಂಭಿಸಲಾದ ದಿನವಿದು. ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವದ ಮಹತ್ವ, ವಿಶೇಷತೆಬಗ್ಗೆ ಇಣುಕು ನೋಟ ಇಲ್ಲಿದೆ…

Advertisement

ದೇಶಕ್ಕೆ ಬೆನ್ನೆಲುಬಾದ ಸಂವಿಧಾನ
1947ರ ಆಗಸ್ಟ್ 29 ರಂದು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಗಾಗಿ ಸಮಿತಿಯೊಂದನ್ನು ನೇಮಕ ಮಾಡಲಾಯಿತು. ಈ ಸಮಿತಿ ರಚಿಸಿದ ಕರಡು ಅನೇಕ ತಿದ್ದುಪಡಿಗಳಿಗೆ, ಪರಿಶೀಲನೆಗೆ ಒಳಪಟ್ಟು ಕೊನೆಗೆ ಜನವರಿ 26, 1950ರಲ್ಲಿ ಜಾರಿಗೆ ಬಂತು. ಭಾರತದ ಸಂವಿಧಾನದಲ್ಲಿ ಅನ್ಯ ರಾಷ್ಟ್ರಗಳ ಸಂವಿಧಾನದಿಂದ ಅಳವಡಿಸಿಕೊಂಡ ತತ್ವಗಳಿವೆ (ಬ್ರಿಟನ್‌, ಅಮೆರಿಕ ಸಂಯುಕ್ತ ಸಂಸ್ಥಾನ, ಐರ್ಲೆಂಡ್‌, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ಸೋವಿಯತ್‌ ಒಕ್ಕೂಟ, ಜಪಾನ್‌). ಕೆಲ ವರ್ಷಗಳ ಹಿಂದೆ ನೇಪಾಳದಲ್ಲಿ ಅನುಷ್ಠಾನಕ್ಕೆ ಬಂದಿರುವ ಸಂವಿಧಾನವೂ ಭಾರತದ ಸಂವಿಧಾನದಲ್ಲಿನ ಹಲವು ತತ್ವಗಳಿಂದ ಸ್ಫೂರ್ತಿ ಪಡೆದಿದೆ.

ಸಂವಿಧಾನ ರಚನೆ ಅತ್ಯಂತ ಜಟಿಲ ಪ್ರಕ್ರಿಯೆಯಾಗಿತ್ತು. ಮೊದಲು ಸಂವಿಧಾನ ಸಭೆಯಲ್ಲಿನ ತಜ್ಞರು ವಿದೇಶಗಳಿಗೆ ತೆರಳಿ, ಅಲ್ಲಿನ ನ್ಯಾಯಶಾಸ್ತ್ರ ಪರಿಣತರ ಸಲಹೆಗಳನ್ನು ಪಡೆದರು, ಅಲ್ಲಿನ ಸಂವಿಧಾನಗಳ ಪೂರ್ಣ ಅಧ್ಯಯನ ನಡೆಸಿದರು. ಸಂವಿಧಾನ ಸಭೆಯಲ್ಲಿ 389 ಸದಸ್ಯರು ಇದ್ದರು. ವಿವಿಧ ಪ್ರಾಂತ್ಯಗಳ 262 ಪ್ರತಿನಿಧಿಗಳು, ವಿವಿಧ ರಾಜ್ಯಗಳ 93 ಪ್ರತಿನಿಧಿಗಳು, ಮುಖ್ಯ ಆಯುಕ್ತ ಪ್ರಾಂತ್ಯಗಳ 3 ಪ್ರತಿನಿಧಿಗಳು, ಧರ್ಮ ಪ್ರತಿನಿಧಿಗಳೂ, ಬಲೂಚಿಸ್ತಾನದ ಓರ್ವ ಪ್ರತಿನಿಧಿ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. 7635 ತಿದ್ದುಪಡಿಗಳು ಪ್ರಸ್ತಾಪಗೊಂಡವು, 2473 ತಿದ್ದುಪಡಿಗಳು ವಿಸ್ತೃತವಾಗಿ ಚರ್ಚೆಗೆ ಒಳಪಟ್ಟವು. ಸಂವಿಧಾನ ರಚನೆಯ ಪ್ರಕ್ರಿಯೆಗೆ 2 ವರ್ಷ, 11 ತಿಂಗಳು, 18 ದಿವಸ ಹಿಡಿಯಿತು. ಡಾ. ಬಿ.ಆರ್‌. ಅಂಬೇಡ್ಕರ್‌ ನೇತೃತ್ವದ ಸಂವಿಧಾನದ ಕರಡು ರಚನಾ ಸಮಿತಿ 1949ರ ನವೆಂಬರ್‌ 26ರಂದು ಕರಡನ್ನು ಸಲ್ಲಿಸಿತು. ಸಿ. ರಾಜಗೋಪಾಲಾಚಾರಿ, ಸರ್ದಾರ್‌ ಪಟೇಲ್‌, ಜವಾಹರ್‌ಲಾಲ್‌ ನೆಹರೂ, ಶ್ಯಾಮ ಪ್ರಸಾದ್‌ ಮುಖರ್ಜಿ, ಡಾ.ಎಸ್‌. ರಾಧಾಕೃಷ್ಣನ್‌, ಜಗಜೀವನ್‌ರಾಮ್‌ರಂಥ ನಾಯಕರು ಇದಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಈ ವಿಷಯದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ನ್ಯಾಷನಲ್‌ ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷೆ ಸರೋಜಿನಿ ನಾಯ್ಡು, ಅಮ್ಮು ಸ್ವಾಮಿನಾಥನ್‌, ಬೇಗಂ ಎಜಾಜ್‌ ರಸೂಲ್‌(ಸಂವಿಧಾನ ಸಮಿತಿಯ ಮೊದಲ ಮಹಿಳಾ ಮುಸ್ಲಿಂ ಸದಸ್ಯೆ), ವಿಜಯ ಲಕ್ಷ್ಮೀ ಪಂಡಿತ್‌ ಸೇರಿದಂತೆ ಅನೇಕ ಮಹಿಳೆಯರ ಯೋಗದಾನವಿದೆ. ಇದು ವಿಶ್ವದಲ್ಲಿಯೇ ಬೃಹತ್‌ ಸಂವಿಧಾನವಾಗಿದ್ದು ಮೂಲ ಸಂವಿಧಾನವು ಒಟ್ಟು 395 ವಿಧಿಗಳು, 8 ಅನುಸೂಚಿಗಳು ಮತ್ತು 8 ಭಾಗಗಳನ್ನು ಒಳ ಗೊಂಡಿತ್ತು. ಭಾರತೀಯ ಸಂವಿಧಾನದಲ್ಲಿ ಪ್ರಪಂಚದ ಸಂವಿಧಾನಗಳ ಅತ್ಯು ತ್ತಮ ಅಂಶಗಳನ್ನು ಆಯ್ಕೆ ಮಾಡಿಕೊಂಡಿರುವುದು ಕಾಣಿಸುತ್ತದೆ. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಪರಿಕಲ್ಪನೆ ಫ್ರೆಂಚ್‌ ಸಂವಿಧಾನದಿಂದ, ಪಂಚ ವಾರ್ಷಿಕ ಯೋಜನೆಯ ಪರಿಕಲ್ಪನೆ ಯುಎಸ್‌ಎಸ್‌ಆರ್‌ನಿಂದ, ಸಮಾಜೋ ಆರ್ಥಿಕ ಪರಿಕಲ್ಪನೆ ಐರ್ಲೆಂಡ್‌ ಸಂವಿಧಾನದಿಂದ ಮತ್ತು ಸುಪ್ರೀಂ ಕೋರ್ಟ್‌ ಕಾರ್ಯವಿಧಾನಗಳನ್ನು ಜಪಾನ್‌ ಸಂವಿಧಾನದಿಂದ ಆಯ್ದುಕೊಳ್ಳಲಾಗಿದೆ.

  1. ಭಾರತದ ಸಂವಿಧಾನ ಜಾರಿಯಾದ ದಿನವಿದು. ಅಲ್ಲಿಯವರೆಗೂ Government of India Act (1935)/ಭಾರತ ಸರ್ಕಾರ ಕಾಯ್ದೆಯೇ ದೇಶದ ಆಡಳಿತ ಸೂತ್ರವಾಗಿತ್ತು.

2. 26 ಜನವರಿ 1950ರಂದು ಡಾ. ರಾಜೇಂದ್ರ ಪ್ರದೇಶದ ದೇಶದ ಮೊದಲ ರಾಷ್ಟ್ರಪತಿಯಾಗಿ ನೇಮಕವಾದರು. ಅದಕ್ಕೂ ಮುನ್ನ ಭಾರತದ ರಾಷ್ಟ್ರ ಮುಖ್ಯಸ್ಥರ ಅಧಿಕಾರ ಗವರ್ನರ್‌ ಜನರಲ್‌ಗೆ ಇತ್ತು.

3. ಸಾರಾನಾಥ್‌ನಲ್ಲಿನ ಅಶೋಕ ಸ್ತಂಭದ ಸಿಂಹಗಳ ಪ್ರತಿಮೆಯನ್ನು ರಾಷ್ಟ್ರೀಯ ಲಾಂಛನವಾಗಿ ಅಳವಡಿಸಿದ ದಿನವಿದು.

Advertisement

4. 1963ರ ಜನವರಿ 26ರಂದು ನವಿಲನ್ನು ರಾಷ್ಟ್ರೀಯ ಪಕ್ಷಿಯಾಗಿ ಘೋಷಿಸಲಾಯಿತು.

5. 1954ರವರೆಗೂ ಗಣರಾಜ್ಯೋತ್ಸವ ದಿನಾಚರಣೆ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಿತ್ತು. ಇರ್ವಿನ್‌ ಸ್ಟೇಡಿಯಂ(ಈಗ ನ್ಯಾಷನಲ್‌ ಸ್ಟೇಡಿಯಂ), ಕಿಂಗ್ಸ್ ವೇ (ಈಗ ರಾಜಪಥ), ಕೆಂಪು ಕೋಟೆ ಮತ್ತು ರಾಮಲೀಲಾ ಮೈದಾನಗಳಲ್ಲಿ ಆಚರಿಸಲಾಗುತ್ತಿತ್ತು.

6. ಸಂವಿಧಾನದ ಮೂಲ ಪ್ರತಿಗಳು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯ ಕೈ ಬರಹದಲ್ಲಿಇದ್ದು, ಕಲಾವಿದ ಪ್ರೇಮ್‌ ಬಿಹಾರಿ ನರೈನ್‌ ಕ್ಯಾಲಿಗ್ರಫಿ ಶೈಲಿಯಲ್ಲಿ ಬರೆದಿದ್ದಾರೆ.

7. 1950ಕ್ಕೂ ಮುನ್ನ ಭಾರತೀಯ ವಾಯುಪಡೆಯನ್ನು ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌ ಎಂದು ಕರೆಯಲಾಗುತ್ತಿತ್ತು. ಮೊದಲ ಗಣರಾಜ್ಯೋತ್ಸವದಂದು “ರಾಯಲ್‌’ ಎಂಬ ಪದವನ್ನು ಕೈಬಿಟ್ಟು ಇಂಡಿಯನ್‌ ಏರ್‌ಫೋರ್ಸ್‌ ಎಂದು ಹೆಸರಿಸಲಾಯಿತು

ಜನವರಿ 26 ಏಕೆ?
ಭಾರತವು ಗಣರಾಜ್ಯವಾಗಿ ಅಸ್ತಿತ್ವಕ್ಕೆ ಬರುವ 20 ವರ್ಷಗಳ ಹಿಂದೆ, ಅಂದರೆ 1930ರ ಜನವರಿ 26 ರಂದು ಲಾಹೋರ್‌ನ ಕಾಂಗ್ರೆಸ್‌ ಅಧಿ ವೇಶನದಲ್ಲಿ ಪೂರ್ಣ ಸ್ವರಾಜ್ಯವನ್ನು ಘೋಷಿಸಿದೆವು. ಈ ಘೋಷಣೆ ನಡೆದ ಆರು ವಾರಗಳ ನಂತರ, ಮಹಾತ್ಮಾ ಗಾಂಧಿಯವರು ತಮ್ಮ ಐತಿಹಾಸಿಕ ದಂಡಿಯಾತ್ರೆಯನ್ನು ಆರಂಭಿಸಿದರು. 26 ಜನವರಿಯನ್ನು ಭಾರತೀಯ ಸ್ವರಾಜ್ಯದದಿನವೆಂದೇ ಹೇಳಲಾಗುತ್ತದೆ. ಹೀಗಾಗಿ, ಡಾ. ಅಂಬೇಡ್ಕರ್‌ ನೇತೃತ್ವದಲ್ಲಿ ಸಂವಿಧಾನ ರಚನೆ ಪೂರ್ಣಗೊಂಡ ಮೇಲೆ 2 ತಿಂಗಳುಗಳ ಕಾಲ ಕಾದು, 26 ಜನವರಿ 1950ರಲ್ಲಿ ಅದನ್ನು ಅಳವಡಿಸಿಕೊಳ್ಳಲಾಯಿತು.

ಸೇನಾ ದಿನದಂದು ಪುರುಷರ ತುಕಡಿಗಳನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ತಾನಿಯಾ ಶೇರ್ಗಿಲ್‌, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಮೊದಲ ಮಹಿಳಾ ಪರೇಡ್‌ ಅಡ್ವಾಂಟೆಂಟ್‌ ಆಗಲಿದ್ದಾರೆ. ಕಳೆದ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕ್ಯಾ. ಭಾವನಾ ಕಸ್ತೂರಿ ಸಂಪೂರ್ಣ ಪುರುಷರ ತಂಡವನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎನಿಸಿದ್ದರು.

– ಭಾರತೀಯ ಸಂವಿಧಾನವು ವಿಶ್ವದಲ್ಲಿಯೇ ಬೃಹತ್‌ ಹಾಗೂ ಸದೃಢ ಸಂವಿಧಾನವಾಗಿದ್ದು. ಮೂಲ ಸಂವಿಧಾನದವು ಒಟ್ಟು 395 ವಿಧಿಗಳು, 8 ಅನುಸೂಚಿಗಳು ಮತ್ತು 8 ಭಾಗಗಳನ್ನು ಒಳಗೊಂಡಿತ್ತು. ಪ್ರಸ್ತುತ ಸಂವಿಧಾನವು ಒಟ್ಟು 448 ವಿಧಿಗಳು, 22 ವಿಭಾಗಗಳು, 103 ತಿದ್ದುಪಡಿಗಳನ್ನು
ಒಳಗೊಂಡಿದೆ.
– ಜನವರಿ 24ರಂದು ಸಂವಿಧಾನ ರಚನಾ ಸಮಿತಿಯ 284 ಸದಸ್ಯರು ಸಂವಿಧಾನಕ್ಕೆ ಸಹಿ ಹಾಕಿದರು. ಈ ಸಮಯದಲ್ಲಿ ಹೊರಗಡೆ ಮಳೆ ಸುರಿಯುತ್ತಿತ್ತು. ಅದನ್ನು ಶುಭ ಎಂದು ಭಾವಿಸಲಾಯಿತು.
– ಸಂವಿಧಾನದ ಮೂಲ ಪ್ರತಿಗಳನ್ನು ಪಾರ್ಲಿಮೆಂಟ್‌ ಗ್ರಂಥಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next