ಕನಕಪುರ: ಗಣರಾಜ್ಯೋತ್ಸವ ಆಚರಣೆ ಅಂಗವಾಗಿ ತಾಲೂಕು ಕಚೇರಿ ಆವರಣದಲ್ಲಿ ವಿವಿಧ ಇಲಾಖೆಯ ಅಧಿಕಾರಿ, ಸಂಘ ಸಂಸ್ಥೆಯ ಪದಾಧಿ ಕಾರಿಗಳ ಸಮ್ಮುಖದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪೂರ್ವಭಾವಿಸಭೆ ಆಯೋಜಿ ಸಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ತಹಶೀಲ್ದಾರ್ ವರ್ಷ ಒಡೆಯರ್, ಜ.26 ರಂದು ನಡೆಯುವ ಗಣರಾಜ್ಯೋತ್ಸವ ಆಚರಣೆಯ ಸಲಹೆ ಸೂಚನೆಗಳನ್ನು ಮತ್ತು ಸಿದ್ಧತೆಗಳನ್ನು
ನಡೆಸಲು ಈ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಈ ಸಭೆಗೆ ಎಲ್ಲಾ ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಜರಾಗುವಂತೆ ಆಹ್ವಾನಿಸಲಾಗಿತ್ತು. ಆದರೆ ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ ಅಧಿಕಾರಿಗಳು ಹಾಜರಾಗಿಲ್ಲ. ಇನ್ನು ಮುಂದೆ ಸಭೆಗೆ ಆ ಗೌರವ ತೋರುವಂತಹ ಇಂಥ ವರ್ತನೆಗಳನ್ನು ಬಿಟ್ಟು ಹಾಜರಾಗಿ ಸಭೆಯ ಘನತೆಯನ್ನು ಗೌರವ ಕಾಪಾಡಬೇಕು ಎಲ್ಲ ಇಲಾಖೆ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಂಡು ಗಣರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲು ಸಹಕರಿಸಬೇಕು ಎಂದು ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಶಿವಕುಮಾರ್ ಮಾತನಾಡಿ, ಜನವರಿ 26ರಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಧ್ವಜಾರೋಹಣ ನೆರ ವೇರಿಸಲಿದ್ದು, ತಾಲೂಕು ಕ್ರೀಡಾಂಗಣದಲ್ಲಿ ಆಚರಿಸುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಲೋಪ ದೋಷ ಉಂಟಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಲ್ಲದೆ ಗಣ ರಾಜ್ಯೋತ್ಸವ ದಿನದಂದು ತಮ್ಮ ಇಲಾಖಾ ಕಚೇರಿಗಳಿಗೆ ವಿದ್ಯುತ್ ದೀಪ ಗಳನ್ನು ಅಲಂಕರಿಸಬೇಕು. ಈ ಕಾರ್ಯ ಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಪ್ರತಿ ಇಲಾಖೆಗೂ ಒಂದೊಂದು ಜವಾಬ್ದಾರಿ ವಹಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ವೈ.ಡಿ.ಬೈರೇಗೌಡ, ನಗರಸಭೆ ಆಯುಕ್ತೆ ರಮಾಮಣಿ, ಶಿರಸ್ತೆದಾರ್ ರಘು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.