Advertisement
ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ತುಳಸಿಗೌಡ ಹಾಲಕ್ಕಿ ಅವರ ಸಾಧನೆಯನ್ನು ಬಿಂಬಿಸುವ ಸ್ತಬ್ಧಚಿತ್ರಕ್ಕೆ ಆಯ್ಕೆ ಸಮಿತಿ ಸಮ್ಮತಿ ಸೂಚಿಸಿತ್ತಾದರೂ ಕೊನೆಯ ಸುತ್ತಿನ ಸಭೆಯಲ್ಲಿ ತಿರಸ್ಕೃತಗೊಂಡಿತು ಎಂದು ಮೂಲಗಳು ತಿಳಿಸಿವೆ. ಕೇಂದ್ರ – ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೂ ಅವಕಾಶ ಕೈತಪ್ಪಿದ್ದು ಹೇಗೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದು ರಾಜ್ಯ ಸರಕಾರದ ನಿಷ್ಕ್ರಿಯತೆಗೆ ಸಾಕ್ಷಿ ಎಂದು ಅದು ಟೀಕಿಸಿದೆ.
Related Articles
Advertisement
ಕೇಂದ್ರ ಸರಕಾರ ಅನುಮತಿ ನಿರಾಕರಿಸಿರುವುದು ರಾಜ್ಯ ಬಿಜೆಪಿ ಸರಕಾರದ ನಿಷ್ಕ್ರಿಯತೆಗೆ ಸಾಕ್ಷಿ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ರಾಜ್ಯ ಸರಕಾರದ ಆಸಕ್ತಿ 40 ಪರ್ಸೆಂಟ್ ಕಮಿಷನ್ ಲೂಟಿಯಲ್ಲಿದೆಯೇ ವಿನಾ ಸ್ತಬ್ಧಚಿತ್ರದ ಬಗ್ಗೆ ಒತ್ತಡ ಹೇರುವುದರಲ್ಲಿ ಇಲ್ಲ ಎಂದು ಲೇವಡಿ ಮಾಡಿದೆ.
ಸಂಸದರು ದನಿ ಎತ್ತಿಲ್ಲ
ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ 40 ಪರ್ಸೆಂಟ್ ಕಮಿಷನ್‌ನಲ್ಲಿ ಮುಳುಗಿದ್ದು, ಸ್ತಬ್ಧಚಿತ್ರದ ಬಗ್ಗೆ ಗಂಭೀರವಾಗಿಲ್ಲ. ರಾಜ್ಯ ಬಿಜೆಪಿ ನಾಯಕರು ಇಲ್ಲಿ ಕೂಗಾಡುತ್ತಾರೆ, ಅಲ್ಲಿ ಸುಮ್ಮನಿರುತ್ತಾರೆ ಎಂದು ನಾನು ಹೇಳಿದ್ದು ಇದಕ್ಕೇ. ಬಿಜೆಪಿಯ ಯಾವುದೇ ಸಂಸದರು ಇದರ ಬಗ್ಗೆ ಧ್ವನಿ ಎತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಡಿ.ಕೆ. ಸುರೇಶ್ ಟೀಕೆ
ಅನುಮತಿ ನಿರಾಕರಣೆಗೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದ್ದು, ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡದಿರುವುದು ಸರಿಯಲ್ಲ ಎಂದಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಪ್ರವೀಣ್ ಶೆಟ್ಟಿ ಅವರು ಕೂಡ ಕೇಂದ್ರದ ಈ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಕಾಶ ಪಡೆಯಲು ಪ್ರಯತ್ನ
ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ಪಡೆಯಲು ಪ್ರಯತ್ನ ನಡೆಸಿದ್ದೇನೆ. ಅನ್ಯ ರಾಜ್ಯಗಳಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಈ ಬಾರಿ ರಾಜ್ಯಕ್ಕೆ ಅವಕಾಶ ಸಿಕ್ಕಿಲ್ಲ. ಆದರೂ ನಾವು ಪ್ರಯತ್ನ ನಡೆಸಿ ದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಪ್ರಕ್ರಿಯೆ ಹೇಗೆ?
ವಾರ್ತಾ ಇಲಾಖೆಯಿಂದ 4 ಥೀಮ್ ಚರ್ಚಿಸಿ ಎರಡನ್ನು ಆಯ್ದುಕೊಂಡು ಸ್ತಬ್ಧಚಿತ್ರ ನಿರ್ಮಾಣ ಕುರಿತು ಕೇಂದ್ರ ರಕ್ಷಣ ಮಂತ್ರಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಅಲ್ಲಿನ ಸಮಿತಿ ಒಪ್ಪಿದರೆ ಅವಕಾಶ ಸಿಗುತ್ತದೆ.
ಕೈಬಿಟ್ಟದ್ದು ಏಕೆ?
ಕರ್ನಾಟಕ ಎಂದಿನಂತೆ ಈ ಬಾರಿಯೂ ಸ್ತಬ್ಧಚಿತ್ರದಲ್ಲಿ ಉತ್ಕೃಷ್ಟ ಪ್ರದರ್ಶನವನ್ನೇ ನೀಡಿದೆ. ಅದರೆ ಇತರ ರಾಜ್ಯಗಳಿಗೂ ಅವಕಾಶ ಕಲ್ಪಿಸ ಬೇಕೆನ್ನುವ ಸದುದ್ದೇಶದಿಂದ ರಾಜ್ಯವನ್ನು ಈ ಬಾರಿ ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ.