Advertisement

ದ.ಕ.: 282 ಕಾಮಗಾರಿಗೆ 30 ಕೋ.ರೂ.

02:31 AM Jan 27, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 30.24 ಕೋ.ರೂ. ಹಂಚಿಕೆಯಾಗಿದ್ದು, 282 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾ ರೋಹಣಗೈದು ಅವರು ಸಂದೇಶ ನೀಡಿದರು.

ಶಿರಾಡಿ ಘಾಟಿಯಲ್ಲಿ 23.60 ಕಿ.ಮೀ. ಸುರಂಗ ಮಾರ್ಗ ಕಾಮಗಾರಿಯನ್ನು 10 ಸಾವಿರ ಕೋ.ರೂ. ವೆಚ್ಚದಲ್ಲಿ ಆರಂಭಿಸಲಾಗುತ್ತದೆ. ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿಗಳಲ್ಲಿ ರಸ್ತೆ ಸುಧಾರಣಾ ಕಾಮಗಾರಿಗಳನ್ನು 114.70 ಕೋ.ರೂ.ಗಳಲ್ಲಿ ಹಾಗೂ ರಾ.ಹೆ. 66ರ ಕೂಳೂರಿನಲ್ಲಿ ಫಲ್ಗುಣಿ ನದಿಗೆ 69.02 ಕೋ.ರೂ.ಗಳಲ್ಲಿ 6 ಪಥದ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ ಎಂದರು.

ಕುಳಾಯಲ್ಲಿ 196.51 ಕೋ.ರೂ.ಗಳಲ್ಲಿ ಮೀನು ಗಾರಿಕಾ ಬಂದರು ನಿರ್ಮಿಸಲಾಗುತ್ತಿದೆ. ಮಂಗಳೂರಿ ನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಹಸಿರು ನಿಶಾನೆ ತೋರಿದ್ದು, ಸ್ಥಳೀಯ ಯುವಕರಿಗೆ ಉದ್ಯೋ ಗಾವಕಾಶ ದೊರೆಯಲಿದೆ ಎಂದು ಹೇಳಿದರು.

ಕೋಸ್ಟ್‌ಗಾರ್ಡ್‌ಗೆ 1 ಸಾವಿರ ಕೋ.ರೂ. :

Advertisement

ದೇಶದಲ್ಲೇ ಮೊದಲ ಕೋಸ್ಟ್‌ಗಾರ್ಡ್‌ ಅಕಾಡೆಮಿ ಕೆಂಜಾರಿನಲ್ಲಿ ಸ್ಥಾಪನೆಯಾಗಲಿದ್ದು, ಕೇಂದ್ರದಿಂದ 1 ಸಾವಿರ ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಇತ್ತೀಚೆಗೆ ಪ್ರಧಾನಿ ಅವರು ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್‌ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮಾಲಿನ್ಯಮುಕ್ತ ಅನಿಲದ ಪೂರೈಕೆಯಾಗಲಿದೆ ಎಂದು ಸಚಿವ ಕೋಟ ತಿಳಿಸಿದರು.

ಸಂಸದ ನಳಿನ್‌ ಕುಮಾರ್‌, ಶಾಸಕರಾದ ಡಿ. ವೇದವ್ಯಾಸ್‌ ಕಾಮತ್‌, ಹರೀಶ್‌ ಕುಮಾರ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್‌ ದಿವಾಕರ ಪಾಂಡೇಶ್ವರ, ತಾ.ಪಂ. ಅಧ್ಯಕ್ಷ ಮೊಹಮ್ಮದ್‌  ಮೋನು, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿ. ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಮನಪಾ ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಡಿಸಿ ಡಾ| ರಾಜೇಂದ್ರ ಕೆ.ವಿ., ಎಡಿಸಿ ಎಂ.ಜೆ. ರೂಪಾ, ಪೊಲೀಸ್‌ ಆಯುಕ್ತ ಶಶಿಕುಮಾರ್‌ ಎನ್‌., ಎಸ್‌ಪಿ ಲಕ್ಷ್ಮೀಪ್ರಸಾದ್‌ ಉಪಸ್ಥಿತರಿದ್ದರು.

8 ಮಂದಿ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ :

2020-21ನೇ ಸಾಲಿನ ಜಿಲ್ಲಾ ಮಟ್ಟದ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ನಾವೀನ್ಯ ಕ್ಷೇತ್ರದಲ್ಲಿ (ಪ್ರಥಮ) ಆಳ್ವಾಸ್‌ ಆಂಗ್ಲ ಮಾಧ್ಯಮ ಶಾಲೆಯ ಅಮೋಘ ನಾರಾಯಣ, (ದ್ವಿತೀಯ) ಶಾರದಾ ಪಿಯು ಕಾಲೇಜಿನ ಪ್ರಖ್ಯಾತ್‌ ವೈ.ಬಿ., ತಾರ್ಕಿಕ ಸಾಧನೆ ತೋರಿದ (ಪ್ರಥಮ) ಪುತ್ತೂರು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಶ್ರಯ ಪಿ., (ದ್ವಿತೀಯ) ಮೂಲ್ಕಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ಶ್ರೀಜಿತ, ಕಲೆ, ಸಾಂಸ್ಕೃತಿಕ, ಸಂಗೀತದಲ್ಲಿ (ಪ್ರಥಮ) ಉರ್ವ ಸೈಂಟ್‌ ಅಲೋಶಿಯಸ್‌ ಆಂಗ್ಲ ಮಾಧ್ಯಮ ಶಾಲೆಯ ಓಜಸ್ವಿ, (ದ್ವಿತೀಯ) ಎಕ್ಸ್‌ಪರ್ಟ್‌ನ ಶ್ರಾವ್ಯಾ ಆರ್‌., ಕ್ರೀಡಾ ವಿಭಾಗದ (ಪ್ರಥಮ)ಸರೋಜಿನಿ ಮಧುಸೂದನ ಕುಶೆ ಪ.ಪೂ. ಕಾಲೇಜಿನ ಆರಾಧನ ಬೇಕಲ್‌, (ದ್ವಿತೀಯ) ಪೊಂಪೈ ಪ್ರೌಢ ಶಾಲೆಯ ಕುಲ್‌ದೀಪ್‌ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು.

7 ಆಸ್ಪತ್ರೆಗಳಿಗೆ ಗೌರವ :

ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿದ ಮಂಗಳೂರಿನ ಇಂಡಿಯಾನಾ ಹಾಸ್ಪಿಟಲ್‌ ಆ್ಯಂಡ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌, ಲೇಡಿಗೋಶನ್‌ ಆಸ್ಪತ್ರೆ, ಫಾ| ಮುಲ್ಲರ್‌ ಆಸ್ಪತ್ರೆ, ಯೇನಪೊಯ ಆಸ್ಪತ್ರೆ, ಪುತ್ತೂರು, ಸುಳ್ಯ ತಾಲೂಕು ಆಸ್ಪತ್ರೆಗಳು ಹಾಗೂ ದೇರಳಕಟ್ಟೆಯ ಜ| ಕೆ.ಎಸ್‌. ಹೆಗ್ಡೆ ಚಾರಿಟೆಬಲ್‌ ಹಾಸ್ಪಿಟಲ್‌ನ ಪ್ರತಿನಿಧಿಗಳನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next