Advertisement

ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳ ಆಕ್ರೋಶ

03:50 PM Jan 04, 2020 | Team Udayavani |

ಜೋಯಿಡಾ: ತಾಲೂಕಿನಲ್ಲಿ ಮನುಷ್ಯರು ಪ್ರಾಣಿಗಳಿಗಿಂತ ಕಡೆಯಾಗಿದ್ದಾರೆ. ಇಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ಪ್ರತಿಬಾರಿಯೂ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ ಬಿಟ್ಟರೆ ಯಾವುದೇ ತಿರ್ಮಾನವಾಗುತ್ತಿಲ್ಲ.ಅರಣ್ಯ ಇಲಾಖೆ ಅಭಿವೃದ್ಧಿಗೆ ಅವಕಾಶ ನೀಡುವ ಸ ಷ್ಟ ತಿರ್ಮಾನ ಕೈಗೊಳ್ಳುವವರೆಗೂ ಸಭೆಗೆ ಬಹಿಷ್ಕಾರ ಹಾಕುವುದಾಗಿ ತಾಪಂ ಸದಸ್ಯರು ಕೆಡಿಪಿ ಸಭೆಯಿಂದ ಹೊರನಡೆದರು.

Advertisement

ಅರಣ್ಯಾಧಿಕಾರಿಗಳು ಸಮಸ್ಯೆ ಬಗೆಹಿರಿಸುವ ಗಡವು ನೀಡಿದ ನಂತರ ಪುನಃ ಸಭೆ ಆರಂಭಿಸಲಾಯಿತು. ಶುಕ್ರವಾರ ಜೋಯಿಡಾ ತಾಪಂ ಅಧ್ಯಕ್ಷೆ ನರ್ಮದಾ ಪಾಕ್ಲೃಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಇಲಾಖೆ ವಿಷಯ ಚರ್ಚೆಗೆ ಬಂದಾಗ ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಒಕ್ಕೂರಲಿನಿಂದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಮುಗಿಬಿದ್ದು, ಅಭಿವೃದ್ಧಿ ಕೆಲಸಕ್ಕೆ ಆಪಾದಿಸುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಒಕ್ಕೂಟದ ಅಧ್ಯಕ್ಷ ಮಂಗೇಶ ಕಾಮತ್‌ ಮಾತನಾಡಿ, ಅರಣ್ಯಾಧಿಕಾರಿಗಳು ತಾಲೂಕಿನ ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದಾಗಿ ತಾಲೂಕಿನ 11 ಗ್ರಾಪಂಗಳಲ್ಲಿ ಸುಮಾರು 74 ಕಾಮಗಾರಿಗಳು ಸ್ಥಗಿತವಾಗಿದೆ. ಅಭಿವೃದ್ಧಿ ಮಾಡುವುದು ಬೇಡ ಎಂದರೆ ಇಲ್ಲಿ ಜನರು ಬದುಕುವುದು ಬೇಡವೇ ಎಂದು ಪ್ರಶ್ನಿಸಿದರು.

ಪ್ರಮುಖರಾದ ತಾಪಂ ಸದಸ್ಯ ಶರತ ಗುರ್ಜರ, ಗ್ರಾಪಂ ಅಧ್ಯಕ್ಷ ಮಂಜುನಾಥ ಮೋಕಾಶಿ, ಗ್ರಾಪಂ ಸದಸ್ಯ ಸಂತೋಷ ಮಂಥೇರೊ ಮುಂತಾದವರು ಅರಣ್ಯ ಇಲಾಖೆ ಅಭಿವೃದ್ಧಿಗೆ ಅಡ್ಡಿಪಡಿಸುವ ವಿರೋಧಿ ನೀತಿ ಖಂಡಿಸಿದರು.

ಅರಣ್ಯ ಇಲಾಖೆ ತಮಗೆ ಬೇಕಾದೆಡೆ ರಸ್ತೆಗಳನ್ನು ನಿರ್ಮಿಸಿಕೊಳ್ಳುತ್ತಿದೆ. ಆದರೆ ಸಾರ್ವಜಜನಿಕರಿಗೆ ರಸ್ತೆ ನಿರ್ಮಿಸಲು ಅಡ್ಡಿಪಡಿಸುತ್ತಿದೆ.  ಈ ರೀತಿ ಪ್ರಗತಿಗೆ ಅಡ್ಡಿಪಡಿಸುವುದಾದರೆ, ಈ ಕೆಡಿಪಿ ಸಭೆ ಏಕೆ?. ಕಳೆದೊಂದು ವರ್ಷದಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ತಿರ್ಮಾನ ಕೈಗೊಳ್ಳಲಾಗುತ್ತಿಲ್ಲ. ಆದ್ದರಿಂದ ಅಭಿವೃದ್ಧಿ ಕೆಲಸದ ಬಗೆ ಅರಣ್ಯ ಇಲಾಖೆ ನಿಲುವು ಸ್ಪಷಪ್ಟವಾಗಲಿ, ಅರಣ್ಯಾಧಿಕಾರಿಗಳು ಕೆಲಸ ಮಾಡಲು ಬಿಡುತ್ತಾರೋ ಇಲ್ಲವೋ ಸ್ಪಷ್ಟಪಡಿಸಲಿ, ಇಲ್ಲವಾದರೆ ನಾವು ಸಭೆ ಬಹಿಷ್ಕರಿಸಿ ಹೊರ ನಡೆಯುತ್ತೇವೆಂದು ಕಾಮತ್‌ ಹೇಳುತ್ತಿದ್ದತೆ ಎಲ್ಲಾ ಜನಪ್ರತಿನಿಧಿಗಳು ಸಭೆಯಿಂದ ಹೊರನಡೆದರು.

Advertisement

ಅಷ್ಟರಲ್ಲೆ, ತಾಲೂಕು ಅಧಿಕಾರಿಗಳು ಹಾಗೂ ಜಿಪಂ ಸದಸ್ಯ ರಮೇಶ ನಾಯ್ಕ ಹೊರನಡೆದ ಸದಸ್ಯರನ್ನು ಮನವರಿಕೆ ಮಾಡಿಸಿ, ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿ, ಅರಣ್ಯಾಧಿಕಾರಿಗಳು ತಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಜ. 7ರೊಳಗೆ ತಿರ್ಮಾನ ಕೈಗೊಂಡು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಮತ್ತೆ ಕೆಡಿಪಿ ಸಭೆ ಆರಂಭಗೊಂಡಿತು.

ಆರೋಗ್ಯ ಕೇಂದ್ರ ಮುಚ್ಚಿ: ತಾಲೂಕಿನ ಗುಂದ, ಕುಂಬಾರವಾಡಾ, ಉಳವಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಕೊರತೆ ಇದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಮೇಲಧಿಕಾರಿಗಳು ಯಾವುದೇ ಸೂಕ್ತ ಕ್ರಮಕೈಗೊಳ್ಳದೆ ಕೆಡಿಪಿ ಸಭೆಗೆ ಭರವಸೆ ನೀಡುತ್ತಲೇ ಕಾಲಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಾ| ಕೀರ್ತಿ ತಾಲೂಕು ಕೇಂದ್ರದಲ್ಲೆ ಕೆಲಸ ಮಾಡಲಿ. ಉಳಿದ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡಲಾಗದಿದ್ದರೆ ಆಸ್ಪತ್ರೆ ಬಾಗಿಲು ಮುಚ್ಚಿ ಎಂದು ಮಂಗೇಶ ಕಾಮತ್‌ ಹೇಳಿ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಾಲೂಕು ವೈದ್ಯಾಧಿ ಕಾರಿ ಸುಜಾತಾ ಉಕ್ಕಲಿ ಪ್ರತಿಕ್ರಿಯಿಸಿ, ಹೊಸ ವೈದ್ಯಾಧಿಕಾರಿಗಳು ಬಂದ ಕೆಲವೇ ದಿನದಲ್ಲಿ ಪುನಃ ವರ್ಗಾವಣೆ ಪಡೆಯುತ್ತಾರೆ. ಆಸ್ಪತ್ರೆ ಸಮಸ್ಯೆಗೆ ಸಾಧ್ಯವಾದಷ್ಟು ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುತ್ತೇವೆ ಎಂದರು.

ಜಿಪಂ ಸದಸ್ಯ ರಮೇಶ ನಾಯ್ಕ, ತಾಪಂ ಇಒ ಆನಂದ ಬಾಡಕುಂದ್ರಿ, ತಾಪಂ ಉಪಾಧ್ಯಕ್ಷ ವಿಜಯ ಪಂಡಿತ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next