ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಎರಡನೇ ಹಂತದ ವಿಸ್ತರಣೆ ನಂತರ ಸಂಪುಟದಲ್ಲಿ ಲಿಂಗಾಯಿತ ಸಮುದಾಯದ ಪ್ರಾತಿನಿಧ್ಯ 9ಕ್ಕೆ ಏರಿದ್ದರೆ, ಒಕ್ಕಲಿಗ ಶಾಸಕರ ಪ್ರಾತಿನಿಧ್ಯ 7ಕ್ಕೆ ಹಿಗ್ಗಿದೆ!
ಮೊದಲ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಲಿಂಗಾಯಿತ ಸಮುದಾಯದ ಎಂಟು ಮಂದಿ ಸಚಿವರಾಗಿದ್ದರು. ಎರಡನೇ ಸುತ್ತಿನ ವಿಸ್ತರಣೆಯಲ್ಲಿ ಲಿಂಗಾಯಿತ ಸಮುದಾಯದ ಬಿ.ಸಿ. ಪಾಟೀಲ್ ಸಂಪುಟ ಸೇರಿದ್ದಾರೆ. ಒಕ್ಕಲಿಗ ಸಮುದಾಯದ ಎಸ್.ಟಿ.ಸೋಮಶೇಖರ್, ನಾರಾಯಣಗೌಡ, ಕೆ.ಗೋಪಾಲಯ್ಯ, ಡಾ.ಕೆ. ಸುಧಾಕರ್ ಸಂಪುಟ ಸೇರಿದ್ದು, ಒಕ್ಕಲಿಗರ ಪ್ರಾತಿನಿಧ್ಯ ಏಳಕ್ಕೆ ಏರಿದೆ.
ಉಳಿದಂತೆ ಕುರುಬ ಸಮುದಾಯದ ಬೈರತಿ ಬಸವರಾಜು, ಬ್ರಾಹ್ಮಣ ಸಮುದಾಯ ಶಿವರಾಮ ಹೆಬ್ಟಾರ್, ಪರಿಶಿಷ್ಟ ಪಂಗಡದ ರಮೇಶ್ ಜಾರಕಿಹೊಳಿ, ರಜಪೂತ ಸಮುದಾಯದ ಆನಂದ್ ಸಿಂಗ್, ಮರಾಠ ಸಮುದಾಯದ ಶ್ರೀಮಂತ ಪಾಟೀಲ್ ಸಂಪುಟ ಸೇರಿದ್ದಾರೆ.
ಬೆಂಗಳೂರು- ಬೆಳಗಾವಿಗೆ ಬಂಪರ್: ಎರಡನೇ ಹಂತದ ಸಂಪುಟ ವಿಸ್ತರಣೆ ಬಳಿಕ ಬೆಂಗಳೂರು ಹಾಗೂ ಬೆಳಗಾವಿಗೆ ಬಂಪರ್ ಕೊಡುಗೆ ಸಿಕ್ಕಂತಾಗಿದೆ. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಎಸ್.ಸುರೇಶ್ ಕುಮಾರ್ ಜತೆಗೆ ಹೊಸದಾಗಿ ಮೂವರು ಸಚಿವರಾಗಿದ್ದು, ಒಟ್ಟು ಏಳು ಸಚಿವ ಸ್ಥಾನ ಸಿಕ್ಕಂತಾಗಿದೆ.
ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ ಜತೆಗೆ ಇದೀಗ ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಸಂಪುಟ ಸೇರುವ ಮೂಲಕ ಜಿಲ್ಲೆಗೆ 4 ಸಚಿವ ಸ್ಥಾನ ದೊರೆತಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಶಿವರಾಮ ಹೆಬ್ಟಾರ್ ಸಚಿವರಾಗುವ ಮೂಲಕ ಕರಾವಳಿಗೂ ಸ್ವಲ್ಪ ಪ್ರಾತಿನಿಧ್ಯ ದೊರೆತಂತಾಗಿದೆ.