Advertisement

City Police Commissioner: ರಾತ್ರಿ ನಡೆಯುವ ಅಪರಾಧಗಳ ಮಾಹಿತಿ ನೀಡುವುದು ಕಡ್ಡಾಯ

12:11 PM Oct 07, 2024 | Team Udayavani |

ಬೆಂಗಳೂರು: ನಗರದಲ್ಲಿ ರಾತ್ರಿ ಸಂದರ್ಭದಲ್ಲಿ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಗರ ಪೊಲೀಸ್‌ ಆಯುಕ್ತರು, ಇನ್ಮುಂದೆ ನಗರದಲ್ಲಿ ರಾತ್ರಿ ವೇಳೆ ಸಂಭವಿಸುವ ಘೋರ ಅಪರಾಧ ಪ್ರಕರಣಗಳ ಬಗ್ಗೆ ಪ್ರತಿ ದಿನ ಮುಂಜಾನೆ 5 ಗಂಟೆಯೊಳಗೆ ನಗರ ಪೊಲೀಸ್‌ ನಿಯಂತ್ರಣ ಕೊಠಡಿಗೆ ವರದಿ ನೀಡುವಂತೆ ನಗರದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸ್‌ ಇನ್‌ ಸ್ಪೆಕ್ಟರ್‌ಗಳಿಗೆ ಸೂಚಿಸಿದ್ದಾರೆ.

Advertisement

ಪ್ರಸ್ತುತ ನಗರದಲ್ಲಿ ರಾತ್ರಿ ವೇಳೆ ಜರುಗುವ ಘೋರ ಅಪರಾಧ ಪ್ರಕರಣಗಳ ವರದಿಯನ್ನು ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗಗಳಿಂದ ಪಡೆದು ನಗರ ಪೊಲೀಸ್‌ ನಿಯಂತ್ರಣ ಕೊಠಡಿ ವಿಭಾಗದ ಅಧಿಕಾರಿಗಳು ನಗರ ಪೊಲೀಸ್‌ ಆಯುಕ್ತರಿಗೆ ಸಲ್ಲಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪ್ರಕ್ರಿಯೆ ಸರಿಯಾಗಿ ಪಾಲನೆ ಆಗುತ್ತಿಲ್ಲ. ಈ ಮಧ್ಯೆ ಇತ್ತೀಚೆಗೆ ನಗರ ಪೊಲೀಸ್‌ ಆಯುಕ್ತರು ನಡೆಸಿದ ಹಿರಿಯ ಅಧಿಕಾರಿಗಳು ಮತ್ತು ಠಾಣಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ನಗರದಲ್ಲಿ ರಾತ್ರಿ ವೇಳೆ ಜರುಗುವ ಘೋರ ಅಪರಾಧ ಪ್ರಕರಣಗಳ ಸಂಬಂಧ ಮುಂಜಾನೆ 6 ಗಂಟೆಗೆ ನೀಡುವ ಮಾಹಿತಿಯಲ್ಲಿ ಕೆಲವು ಪ್ರಕರಣಗಳ ಮಾಹಿತಿ ಸಲ್ಲಿಸದಿರುವುದು, ಸಲ್ಲಿಸಿದ ಮಾಹಿತಿ ಅಸ್ಪಷ್ಟವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಹೀಗಾಗಿ ಮುಂದಿನ ದಿನಗಳಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಗಳು ತಮ್ಮ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸಂಭವಿಸುವ ಘೋರ ಅಪರಾಧ ಪ್ರಕರಣಗಳ ಸಂಬಂಧ ಪೂರ್ಣ ಮಾಹಿತಿಯನ್ನು ಪ್ರತಿ ದಿನ ಮುಂಜಾನೆ 5 ಗಂಟೆಯೊಳಗೆ ನಗರ ಪೊಲೀಸ್‌ ನಿಯಂತ್ರಣ ಕೊಠಡಿಗೆ ನೀಡಬೇಕು ಎಂದು ನಗರ ನಿಯಂತ್ರಣ ಕೊಠಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next