Advertisement

ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಸಿಗುವಂತೆ ವರದಿ ಸಲ್ಲಿಸಿ

09:54 PM Jun 01, 2019 | Team Udayavani |

ಸುಳ್ಯ: ಪ್ರಕೃತಿ ವಿಕೋಪದ ನಷ್ಟವನ್ನು ಭಾಗಶಃ ಎಂದು ಪರಿಗಣಿಸದೆ, ಸಂತ್ರಸ್ತ ರಿಗೆ ಅನುಕೂಲಕರ ರೀತಿಯಲ್ಲಿ ನ್ಯಾಯಬದ್ಧ ವರದಿ ತಯಾರಿಸಿ ಗರಿಷ್ಠ ಪರಿಹಾರ ಒದಗಿ ಸಲು ಸಹಕಾರ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪ್ರಕೃತಿ ವಿಕೋಪ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕುರಿತಂತೆ ತಾ.ಪಂ.ನಲ್ಲಿ ಶನಿವಾರ ಸಚಿವರ ಅಧ್ಯಕ್ಷತೆ ಯಲ್ಲಿ ಸಭೆ ನಡೆಯಿತು. ಹಾನಿ ಉಂಟಾದ ಸಂದರ್ಭ ಸ್ಥಳಕ್ಕೆ ತೆರಳಿ ಮನೆ ಮಂದಿ ಪರಿಸ್ಥಿತಿ ಅವಲೋಕಿಸಿ, ಆ ಕುಟುಂಬಕ್ಕೆ ಪ್ರಯೋಜನ ಆಗುವಂತೆ ವರದಿ ತಯಾರಿ ಸಬೇಕು. ಎಲ್ಲವನ್ನು ನಿಯ ಮದ ಚೌಕಟ್ಟಿನಲ್ಲಿ ಅಳೆಯದೆ ಮಾನವೀ ಯತೆ ಮೂಲಕ ನೆರವಾಗುವಂತೆ ಗ್ರಾಮ ಕರಣಿಕರಿಗೆ, ಜಿ.ಪಂ. ಎಂಜಿನಿಯರ್‌ಗಳಿಗೆ ಸಚಿವರು ಸೂಚಿಸಿದರು.

ಇದೇ ವಿಷಯ ಪ್ರಸ್ತಾವಿಸಿದ ಶಾಸಕ ಅಂಗಾರ, ಕಂದಾಯ ಅಧಿ ಕಾರಿಗಳು, ಜಿಲ್ಲಾ ಪಂಚಾ ಯತ್‌ ಎಂಜಿನಿಯರ್‌ಗಳು ನಷ್ಟ ಅಂದಾಜಿಸುವಾಗ ಒಂದೇ ರೀತಿಯ ವರದಿ ನೀಡ ಬೇಕು. ನಷ್ಟವನ್ನು ಬೇರೆ ಬೇರೆ ರೀತಿಯಲ್ಲಿ ದಾಖಲಿಸಿದರೆ ಫಲಾನುಭವಿಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ ಸಚಿವರ ಸೂಚನೆ ಪಾಲಿಸುವಂತೆ ಅವರು ಹೇಳಿದರು.

ಖಾಸಗಿ ಕಟ್ಟಡ, ಕಾಂಪೌಂಡ್‌ ಕುಸಿದು ಜೀವ ಹಾನಿ, ಇತರ ನಷ್ಟ ಉಂಟಾದಲ್ಲಿ ಅದರ ಮಾಲಕನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ನಿರ್ಲಕ್ಷéದಿಂದ ಅಮಾಯಕರಿಗೆ ತೊಂದರೆ ಉಂಟಾಗಬಾರದು. ಇಂತಹ ಪ್ರಕರಣ ಕಂಡು ಬಂದಲ್ಲಿ ಕಠಿನ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಆದೇಶಿಸಿದರು.

ಪಯಸ್ವಿನಿಗೆ ಕಿಂಡಿ ಅಣೆಕಟ್ಟು
ನಗರದ ನೀರಿನ ಸಮಸ್ಯೆ ಬಗ್ಗೆ ನ.ಪಂ. ಸದಸ್ಯ ಎಂ. ವೆಂಕಪ್ಪ ಗೌಡ ಪ್ರಸ್ತಾವಿಸಿ, ಶುದ್ಧೀಕರಣ ಘಟಕದ ಲೋಪ, ವೆಂಟೆಡ್‌ ಡ್ಯಾಂ ಇಲ್ಲದೆ ನಗರದ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಕಲುಷಿತ ನೀರು ಬಳಸುವ ಸ್ಥಿತಿ ಇದೆ. ಕುಡಿಯುವ ನೀರಿನ ಒದಗಣೆಗೆ ಶಾಶ್ವತ ಯೋಜನೆ ಅನುಷ್ಠಾನವಾಗಬೇಕು ಎಂದರು.

Advertisement

ಪಯಸ್ವಿನಿ ಸಹಿತ ಎಲ್ಲ ನದಿ, ಹೊಳೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಬೇಕು ಎಂದು ಜಿ.ಪಂ. ಸದಸ್ಯ ಎಸ್‌.ಎನ್‌. ಮನ್ಮಥ ಹೇಳಿದರು. ರಾಜ್ಯ ನೀರು ಮತ್ತು ಒಳಚರಂಡಿ ಮಂಡಳಿ ಮೂಲಕ ಸಲ್ಲಿಸಲಾದ 66 ಕೋ.ರೂ. ಯೋಜನೆ ಸರಕಾರದ ಹಂತದಲ್ಲಿ ಇದ್ದು, ಅನುದಾನ ಬಿಡುಗಡೆಗೆ ಬಾಕಿ ಇರುವ ಬಗ್ಗೆ ಶಾಸಕ ಅಂಗಾರ ಸಚಿವರ ಗಮನಕ್ಕೆ ತಂದರು. ಎರಡು ತಾಲೂಕಿನ 9 ಕಡೆ ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪಶ್ಚಿಮವಾಹಿನಿ ಯೋಜನೆಯಡಿ ಪಯಸ್ವಿನಿ ನದಿಗೆ ಕಿಂಡಿ ಅಣೆಕಟ್ಟು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಸ್ತಾವನೆ ಸಲ್ಲಿಸುವಂತೆ ನ.ಪಂ. ಅಧಿಕಾರಿಗಳಿಗೆ ಸೂಚಿಸಿದರು.

ಚರಂಡಿ ದುರಸ್ತಿ ಮಾಡಿ
ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಚರಂಡಿ ದುರಸ್ತಿಗೆ ತತ್‌ಕ್ಷಣ ಪೂರ್ಣಗೊಳ್ಳಬೇಕು ಎಂದು ಸೂಚಿಸಿದ ಸಚಿವರು, ನಗರದ ಚರಂಡಿ ಸ್ಥಿತಿಗತಿ ಬಗ್ಗೆ ವಿವರ ಕೇಳಿದರು. ಉತ್ತರಿಸಿದ ಎಂಜಿನಿಯರ್‌, 20 ವಾರ್ಡ್‌ಗಳಲ್ಲಿ ಚರಂಡಿ ದುರಸ್ತಿಗೆ ಟೆಂಡರ್‌ ಪೂರ್ಣಗೊಂಡು ವರ್ಕ್‌ ಆರ್ಡರ್‌ ನೀಡಲಾಗಿದೆ. ಜೂ. 2ರಿಂದ ಕಾಮಗಾರಿ ಆರಂಭಗೊಳ್ಳಲಿದೆ ಎಂದರು. ನಗರದ ಎಸ್‌ವಿಎಂ ಆಸ್ಪತ್ರೆ ರಸ್ತೆ ಬಳಿ, ಹಾಸ್ಟೆಲ್‌ ಮೊದಲಾದೆಡೆ ಚರಂಡಿ ಹೂಳು ಎತ್ತಬೇಕು. ಇಲ್ಲದಿದ್ದರೆ ಮಳೆ ನೀರು ಹರಿಯದು. ಅದನ್ನು ತೆಗೆದು ಬೇರೆ ಕಡೆ ಡಂಪ್‌ ಮಾಡಬೇಕು ಎಂದು ಶಾಸಕ ಅಂಗಾರ ಸೂಚನೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಮಾತನಾಡಿ, ಈ ತನಕ ಜ್ವರ ಪ್ರಕರಣ ದಾಖಲಾಗಿಲ್ಲ. ಸೊಳ್ಳೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಲ್ಲಿ 5, ಗ್ರಾ.ಪಂ.ಗಳಲ್ಲಿ 4, ನ.ಪಂ.ನಲ್ಲಿ 1 ಫಾಗಿಂಗ್‌ ಯಂತ್ರಗಳು ಇವೆ ಎಂದರು. ನಗರದಲ್ಲಿ ಫಾಗಿಂಗ್‌ ಆಗಿಲ್ಲ. ತತ್‌ಕ್ಷಣ ಮಾಡಬೇಕು ಎಂದು ವೆಂಕಪ್ಪ ಗೌಡ ಹೇಳಿದರು. ಜ್ವರ ಬಂದಲ್ಲಿ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ನಗರದೆಲ್ಲೆಡೆ ಫಾಗಿಂಗ್‌ ಆರಂಭಿಸುವಂತೆ ಖಾದರ್‌ ಸೂಚಿಸಿದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಇ.ಒ. ಮಧು ಕುಮಾರ್‌ ಉಪಸ್ಥಿತರಿದ್ದರು.

ನಿರ್ವಹಣ ತಂಡ ರಚನೆ
ಪ್ರಾಕೃತಿಕ ವಿಕೋಪ ಪರಿಸ್ಥಿತಿ ನಿಭಾಯಿಸಲು ತಾಲೂಕು ಆಡಳಿತ ಯಾವ ರೀತಿ ಸಿದ್ಧವಾಗಿದೆ ಎಂಬ ಬಗ್ಗೆ ತಹಶೀಲ್ದಾರ್‌ ಉತ್ತರಿಸಿ, 28 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ನಿರ್ವಹಣ ತಂಡ ರಚಿಸಲಾಗಿದೆ. ಅಗತ್ಯ ಸಂದರ್ಭದಲ್ಲಿ ಬೇಕಾದ ಪರಿಕರಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next