Advertisement

ತ್ಯಾಜ್ಯ ನಿಯಮ ಪಾಲಿಸದಿದ್ದರೆ ಎನ್‌ಜಿಟಿಗೆ ವರದಿ

12:28 AM Jul 22, 2019 | Lakshmi GovindaRaj |

ಬೆಂಗಳೂರು: ಘನ ತ್ಯಾಜ್ಯ ವಿಲೇವಾರಿ ನಿಯಮವನ್ನು ಆಗಸ್ಟ್‌ ಅಂತ್ಯದೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡದಿದ್ದರೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ (ಎನ್‌ಜಿಟಿ) ಬಿಬಿಎಂಪಿ ವಿರುದ್ಧ ವರದಿ ಸಲ್ಲಿಸಲಾಗುವುದು ಎಂದು ಎನ್‌ಜಿಟಿ ರಾಜ್ಯಮಟ್ಟದ ಘನ ತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅದಿ ಎಚ್ಚರಿಕೆ ನೀಡಿದರು.

Advertisement

ಪುರಭವನದಲ್ಲಿ ಭಾನುವಾರ ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ವಲಯದ ಘನತ್ಯಾಜ್ಯ ವಿಲೇವಾರಿ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಶೇ.70ರಿಂದ 80ರಷ್ಟು ವಿದ್ಯಾವಂತರಿದ್ದಾರೆ. ಆದರೂ ಕಸ ವಿಂಗಡಣೆ ಆಗುತ್ತಿಲ್ಲ. ಪ್ಲಾಸ್ಟಿಕ್‌ ಬಳಕೆ ನಿರಂತರವಾಗಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಂಡು ದುಪ್ಪಟ್ಟು ದಂಡ ವಿಧಿಸಿದಾಗ ಮಾತ್ರ ನಿಮಯ ಅನುಷ್ಠಾನ ಸಾಧ್ಯ ಎಂಬ ಸ್ಥಿತಿಗೆ ಬಂದಿದೆ ಎಂದು ಹೇಳಿದರು.

ಬೀದರ್‌, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿಯಮವನ್ನು ಪರಿಣಾಮಕಾರಿ ಅನುಷ್ಠಾನ ಮಾಡಲಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಏಕೆ ಅದು ಸಾಧ್ಯವಾಗುತ್ತಿಲ್ಲ? ಆಗಸ್ಟ್‌ ಅಂತ್ಯದೊಳಗೆ ನಗರದಲ್ಲಿ ನಿಯಮ ಪ್ರಕಾರ ಘನ ತ್ಯಾಜ್ಯ ವಿಲೇವಾರಿ ನಡೆಯಬೇಕು. ಇಲ್ಲದಿದ್ದರೆ ಬಿಬಿಎಂಪಿ ವಿರುದ್ಧ ಹಸಿರು ನ್ಯಾಯಪೀಠಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ದುಪ್ಪಟ್ಟು ದಂಡ ವಿಧಿಸಿ: ಮನೆ ಕಸ ವಿಂಗಡಣೆ ಕಡ್ಡಾಯಗೊಳಿಸಬೇಕು. ಹಸಿ ಕಸ, ಒಣ ಕಸ ವಿಂಗಡಿಸಿ ಕೊಡದಿದ್ದರೆ ದುಪ್ಪಟ್ಟು ದಂಡ ವಿಧಿಸಬೇಕು. ವಾರ್ಡ್‌ಗಳಲ್ಲಿ ಉತ್ಪತ್ತಿ ಆಗುವ ಕಸವನ್ನು ವಾರ್ಡ್‌ನಲ್ಲೇ ಸಂಸ್ಕರಿಸಿದಾಗ ಮಾತ್ರ ಕಸದ ಸಮಸ್ಯೆಗೆ ಪರಿಹಾರ ಸಿಗಲಿದೆ. ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ನಗರದಲ್ಲಿ ಬಳಕೆ ಮಾಡದಂತೆ ಕಟ್ಟಿನಿಟ್ಟಿನ ಕಾನೂನು ಜಾರಿಗೊಳಿಸಬೇಕು. ಬೈಲಾದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ದುಪ್ಪಟ್ಟು ದಂಡ ವಿಧಿಸುವ ಮೂಲಕ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಎಲ್ಲರ ಸಹಕಾರದಿಂದ ಮಾತ್ರ ನಗರದಲ್ಲಿ ಘನತ್ಯಾಜ್ಯ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸಾಧ್ಯ. ಪಾಲಿಕೆಯ ಎಂಟು ವಲಯಗಳಲ್ಲೂ ಎನ್‌ಜಿಟಿ ಸಭೆ ಆಯೋಜಿಸಲಾಗುತ್ತಿದೆ. ಎಲ್ಲ ವಾರ್ಡ್‌ಗಲ್ಲೂ ಸಮರ್ಪಕವಾಗಿ ತ್ಯಾಜ್ಯ ವಿಂಗಡಿಸಿ ಕೊಡಬೇಕು. ಕಸ ಬೇರ್ಪಡಿಸಿ ನೀಡದಿದ್ದರೆ ದುಪಟ್ಟು ದಂಡ ವಿಧಿಸಲಾಗುತ್ತದೆ ಎಂದರು. ಶಾಸಕಿ ಸೌಮ್ಯಾ ರೆಡ್ಡಿ, ಆಡಳಿತ ಪಕ್ಷದ ಮಾಜಿ ನಾಯಕ ಮಹಮ್ಮದ್‌ ರಿಜ್ವಾನ್‌ ನವಾಬ್‌ ಮೊದಲಾದವರು ಇದ್ದರು.

Advertisement

ಸಾರ್ವಜನಿಕರಿಗೂ ದಂಡದ ಬಿಸಿ: “ಆಗಸ್ಟ್‌ನಿಂದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಬಳಕೆದಾರರಿಗೂ ದಂಡ ವಿಧಿಸಲಾಗುತ್ತದೆ. ಕಳೆದ ಒಂದು ವಾರದಿಂದ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಳಿಗೆ ಮತ್ತು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ನೀಡುವ ವ್ಯಾಪಾರ ಮಳಿಗೆ, ಹೋಟಲ್‌ಗ‌ಳ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನ ವಶಕ್ಕೆ ಪಡೆದು, ದಂಡ ವಿಧಿಸುತ್ತಿದ್ದಾರೆ. ಇನ್ಮುಂದೆ ಬೀದಿ ವ್ಯಾಪಾರಿಗಳಿಗೂ ವಿನಾಯ್ತಿ ನೀಡುವುದಿಲ್ಲ. ಆಗಸ್ಟ್‌ನಿಂದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಪ್ಯಾಸ್ಟಿಕ್‌ ಕ್ಯಾರಿ ಬ್ಯಾಗ್‌ ಬಳಸುವ ಸಾರ್ವಜನಿಕರಿಗೂ ದಂಡ ವಿಧಿಸಲಾಗುವುದು,’ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next