ಹಾಸನ: ನಾಗಮಂಗಲದ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢವಾಗುತ್ತಿದ್ದಂತೆ ಗಾಬರಿಗೆ ಒಳಗಾಗಿದ್ದ ಹಾಸನದ ಜನತೆ ಸದ್ಯ ನಿರಾಳರಾಗಿದ್ದಾರೆ. ನಾಗಮಂಗಲದ ಸೋಂಕಿತನೊಂದಿಗೆ ಸಂಪರ್ಕಕ್ಕೆ ಬಂದ ಹಾಸನದ ಎಲ್ಲರ ವೈದ್ಯಕೀಯ ವರದಿಯೂ ಜಿಲ್ಲಾಧಿಕಾರಿಗಳ ಕೈ ಸೇರಿದ್ದು, ಎಲ್ಲವೂ ನೆಗೆಟಿವ್ ಆಗಿದೆ.
ಮುಂಬೈನಿಂದ ಹಾಸನದ ಮೂಲಕ ಊರಿಗೆ ತೆರಳುವಾಗ ನಾಗಮಂಗಲದ ವ್ಯಕ್ತಿ ಎಂಟು ಜನರ ಜೊತೆ ನೇರ ಸಂಪರ್ಕಕ್ಕೆ ಬಂದಿದ್ದ. ಓರ್ವ ಆತನೊಂದಿಗೆ ಮುಂಬೈನಿಂದ ಬಂದಿದ್ದ. ಇವರಿಬ್ಬರೂ 22 ಗಂಟೆಗಳ ಕಾಲ ಒಟ್ಟಿಗೆ ಪ್ರಯಾಣಿಸಿದ್ದರು. ಈಗ ಎಲ್ಲಾ ಎಂಟು ಜನರ ಪರೀಕ್ಷೆ ನಡೆಸಿದ್ದು, ಎಲ್ಲರ ವರದಿಯೂ ಕೋವಿಡ್ ನೆಗೆಟಿವ್ ಆಗಿದೆ.
ನಾಗಮಂಗಲದ ವ್ಯಕ್ತಿಗೆ ಸೋಂಕು ದೃಢವಾಗುತ್ತಿದ್ದಂತೆ ಹಾಸನದ ಜನತೆಯಲ್ಲಿ ಆತಂಕ ಮನೆಮಾಡಿತ್ತು. ಕೂಡಲೇ ಎಲ್ಲಾ ನೇರ ಸಂಪರ್ಕಿತರನ್ನು ಕರೆತಂದು ಜಿಲ್ಲಾಡಳಿತ ಪರೀಕ್ಷೆಗೊಳಪಡಿಸಿತ್ತು.
ಎಂಟು ನೇರ ಸಂಪರ್ಕ, 30 ದ್ವಿತೀಯ ಸಂಪರ್ಕದ ಜನರನ್ನು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ 8 ಪ್ರಾಥಮಿಕ ಸಂಪರ್ಕಿತರು ಸೇರಿ ಎಲ್ಲಾ 38 ಜನರ ವರದಿ ನೆಗೆಟಿವ್ ಬಂದಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ವರದಿ ನೆಗೆಟಿವ್ ಬಂದರೂ ಜಿಲ್ಲಾಡಳಿತ ಎಲ್ಲರನ್ನೂ ಆಸ್ಪತ್ರೆಯಲ್ಲಿ ಕ್ವಾರಂಟೇನ್ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಜಿಲ್ಲೆಯ ಗಡಿಭಾಗ ಸಂಪೂರ್ಣ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.