Advertisement

Report: ಅಹಮದಾಬಾದ್‌ನಲ್ಲಿ ಬದುಕು ಸುಲಭ 

07:57 PM Aug 18, 2023 | Team Udayavani |

ನವದೆಹಲಿ: ಭಾರತದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಆರಾಮದಾಯಕವಾಗಿ ಬದುಕಬಹುದಾದ ನಗರ ಯಾವುದು ಗೊತ್ತಾ? ಗುಜರಾತ್‌ನ ಅಹಮದಾಬಾದ್‌ ಎನ್ನುತ್ತದೆ ಪ್ರಾಪರ್ಟಿ ಕನ್ಸಲ್ಟೆಂಟ್‌ ಸಂಸ್ಥೆ ನೈಟ್‌ ಫ್ರಾಂಕ್‌ ಇಂಡಿಯಾ ಬಿಡುಗಡೆ ಮಾಡಿರುವ ವರದಿ.

Advertisement

ಆಯಾ ನಗರದ ಪ್ರತಿ ನಿವಾಸಿಯು ಪಾವತಿಸುವ ಇಎಂಐ (ಸಾಲದ ಮಾಸಿಕ ಕಂತು) ಮೊತ್ತವನ್ನು ಆ ನಗರದ ಸರಾಸರಿ ಕುಟುಂಬವೊಂದರ ಒಟ್ಟು ಆದಾಯದೊಂದಿಗೆ ಭಾಗಿಸಿದಾಗ ಸಿಗುವ ಮೊತ್ತದ ಆಧಾರದಲ್ಲಿ “ಅತ್ಯಂತ ವಾಸ ಯೋಗ್ಯ ನಗರ’ ಯಾವುದು ಎಂಬುದನ್ನು ನಿರ್ಧರಿಸಿ, ಈ ಸಂಸ್ಥೆಯು ವರದಿ ಬಿಡುಗಡೆ ಮಾಡಿದೆ. ಅದರಂತೆ, ಅಹಮದಾಬಾದ್‌ ನಗರವನ್ನು ಅತ್ಯಂತ ವಾಸಯೋಗ್ಯ ನಗರ ಎಂದು ಪರಿಗಣಿಸಲಾಗಿದೆ. ಇಲ್ಲಿ ಸಾಮಾನ್ಯ ಕುಟುಂಬವೊಂದು ತನ್ನ ಒಟ್ಟು ಆದಾಯದ ಶೇ.23ರಷ್ಟನ್ನು ಮಾತ್ರ ಗೃಹ ಸಾಲದ ಇಎಂಐಗೆ ಮೀಸಲಿಡುತ್ತದೆಯಂತೆ.

ವೆಚ್ಚದಾಯಕ ನಗರ ಮುಂಬೈ:

ಈ ಸೂಚ್ಯಂಕದ ಪ್ರಕಾರ, ದೇಶದಲ್ಲಿ ಅತಿ ವೆಚ್ಚದಾಯದ ನಗರವೆಂದರೆ ಮುಂಬೈ. ಇಲ್ಲಿ ಗೃಹ ಸಾಲ ಇಎಂಐಗೆ ಆದಾಯದ ಅನುಪಾತವು ಶೇ.55ರಷ್ಟಿದೆ. ಅಂದರೆ, ಸಾಮಾನ್ಯ ಕುಟುಂಬವೊಂದು ಗೃಹ ಸಾಲ ಪಡೆದರೆ, ಆ ಕುಟುಂಬವು ತನ್ನ ಒಟ್ಟು ಆದಾಯದ ಅರ್ಧಕ್ಕಿಂತ ಹೆಚ್ಚನ್ನು ಇಎಂಐಗೆ ವ್ಯಯಿಸಬೇಕಾಗುತ್ತದೆ. ಈ ಪಟ್ಟಿಯಲ್ಲಿ ಬೆಂಗಳೂರು 4ನೇ ಸ್ಥಾನ ಪಡೆದಿದೆ.

ದುಬಾರಿ ನಗರಗಳು

  1. ಮುಂಬೈ
  2. ಹೈದರಾಬಾದ್‌
  3. ದೆಹಲಿ ಎನ್‌ಸಿಆರ್‌ ಪ್ರದೇಶ
  4. ಬೆಂಗಳೂರು ಮತ್ತು ಚೆನ್ನೈ
  5. ಪುಣೆ
Advertisement

ಮಧ್ಯಮ ವರ್ಗದ ಆದಾಯ 3 ಪಟ್ಟು ಹೆಚ್ಚಳ

ಮಹತ್ವದ ಬೆಳವಣಿಗೆ ಎಂಬಂತೆ, ಭಾರತದ ಮಧ್ಯಮ ವರ್ಗದವರ ಆದಾಯವು ಕಳೆದ 10 ವರ್ಷಗಳಲ್ಲಿ 3 ಪಟ್ಟು ಹೆಚ್ಚಳವಾಗಿದೆ. 2012-13ರ ವಿತ್ತೀಯ ವರ್ಷದಲ್ಲಿ 4.4 ಲಕ್ಷ ರೂ.ಗಳಾಗಿದ್ದ ಆದಾಯವು 2021-22ರ ವೇಳೆಗೆ 13 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ. 10 ವರ್ಷಗಳ ಅವಧಿಯಲ್ಲಿ ದೇಶದ ಶೇ.13.6ರಷ್ಟು ಜನರು ಕಡಿಮೆ ಆದಾಯದ ವರ್ಗದಿಂದ ಹೆಚ್ಚಿನ ಆದಾಯದ ವರ್ಗಕ್ಕೆ ಬದಲಾಗಿದ್ದಾರೆ ಎಂದೂ ವರದಿ ಹೇಳಿದೆ. 2011-12ರಲ್ಲಿ 16 ದಶಲಕ್ಷ ಮಂದಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ದರೆ, ಪ್ರಸಕ್ತ ವರ್ಷ 68.5 ದಶಲಕ್ಷ ಮಂದಿ ಐಟಿಆರ್‌ ಸಲ್ಲಿಸಿದ್ದಾರೆ ಎಂದೂ ಉಲ್ಲೇಖೀಸಲಾಗಿದೆ. ಜತೆಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ 2 ಲಕ್ಷ ರೂ. ಆಗಿರುವ ಭಾರತದ ತಲಾ ಆದಾಯವು 2047ರ ವೇಳೆಗೆ 14.9 ಲಕ್ಷ ರೂ.ಗಳಾಗಲಿವೆ ಎಂದೂ ವರದಿ ಭವಿಷ್ಯ ನುಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next