Advertisement

ವರದಿಯಿಂದ ಹೊಳೆದ ಕಥೆ

11:18 AM Sep 09, 2018 | |

ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳು ಹಲವು ಚಿತ್ರಗಳಿಗೆ ಸ್ಫೂರ್ತಿಯಾಗಿವೆ. ಆ ವರದಿಗಳನ್ನು ಮೂಲವಾಗಿಟ್ಟುಕೊಂಡು, ಕಥೆ ಮಾಡಿ, ಚಿತ್ರ ಮಾಡಿದವರ ಸಂಖ್ಯೆ ಸಾಕಷ್ಟಿದೆ. ಈಗ ಅದೇ ಸಾಲಿಗೆ ಲೋಕೇಂದ್ರ ಸೂರ್ಯ ಸಹ ಸೇರುತ್ತಾರೆ. ಕೆಲವು ವರ್ಷಗಳ ಹಿಂದೆ ಮಳವಳ್ಳಿಯಲ್ಲಿ ನಡೆದ ಘಟನೆಯೊಂದರ ವರದಿಯನ್ನು ಅವರು ದಿನಪತ್ರಿಕೆಯೊಂದರಲ್ಲಿ ಓದಿದ್ದಾರೆ. ಆ ವರದಿ ಅವರ ಆಸಕ್ತಿ ಕೆರಳಿಸಿದೆ.

Advertisement

ಕೊನೆಗೆ ಮಳವಳ್ಳಿಯ ತಮ್ಮ ಪೊಲೀಸ್‌ ಮಿತ್ರರಾದ ಪ್ರಭು ಮತ್ತು ರಿಯಾಜ್‌ ಅವರನ್ನು ಸಂಪರ್ಕಿಸಿದ್ದಾರೆ. ಅವರಿಬ್ಬರು ಹೆಚ್ಚಿನ ಮಾಹಿತಿಗಾಗಿ ಲೋಕೇಂದ್ರ ಅವರನ್ನು  ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌ ಬಳಿ ಕಳುಹಿಸಿದ್ದಾರೆ. ಆ ಕೇಸ್‌ನ ಬಗ್ಗೆ ತಿಳಿದುಕೊಳ್ಳುತ್ತಿದ್ದಂತೆಯೇ, ಲೋಕೇಂದ್ರ ತಲೆಯಲ್ಲೊಂದು ಕಥೆ ಹೊಳೆದಿದೆ. ಆ ಕಥೆಯೇ ಈಗ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’ ಎಂಬ ಚಿತ್ರವಾಗಿದೆ. “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’ ಚಿತ್ರವು ಕಳೆದ ವರ್ಷ ಮೇನಲ್ಲಿ ಪ್ರಾರಂಭವಾಯಿತಂತೆ.

ಇದೀಗ ಸೆನ್ಸಾರ್‌ ಹಂತದಲ್ಲಿರುವ ಈ ಚಿತ್ರದ ಹಾಡುಗಳು ಮತ್ತು ಟೀಸರ್‌ ಮಂಗಳವಾರ ಬಿಡುಗಡೆಯಾಗಿದೆ. ಮಳವಳ್ಳಿಯಲ್ಲಿ ನಡೆದ ಘಟನೆಯೊಂದನ್ನು ಬೇಸ್‌ ಮಾಡಿ, ಕಥೆ ಮಾಡಿರುವುದಾಗಿ ಹೇಳಿಕೊಳ್ಳುವ ಲೋಕೇಂದ್ರ, “ಈ ಕೇಸ್‌ನ ವಿಚಾರವಾಗಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರ ಹತ್ತಿರ ಮಾತಾಡಿದೆ. ಅವರು ಹೇಳಿದ ವಿಷಯ ಇಟ್ಟುಕೊಂಡು, ಒಂದಿಷ್ಟು ಪಾತ್ರಗಳನ್ನು ಸೃಷ್ಟಿಸಿ, ಕಥೆ ವಿಸ್ತರಣೆ ಮಾಡಿ ಈ ಚಿತ್ರ ಮಾಡಿದ್ದೇನೆ. ಈ ಚಿತ್ರದಲ್ಲಿ ಹಲವು ವಿಷಯಗಳಿವೆ.

ಮೂವರು ಅಮಾಯಕರು ಒಂದು ಕೊಲೆ ಕೇಸ್‌ನಲ್ಲಿ ಫಿಟ್‌ ಆದಾಗ, ಅವರ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ ಎಂಬ ವಿಷಯದ ಜೊತೆಗೆ ಇನ್ನೊಂದಿಷ್ಟು ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ ಲೋಕೇಂದ್ರ ಸೂರ್ಯ. ಈ ಚಿತ್ರವನ್ನು ಬೆಂಗಳೂರು, ಕನಕಪುರ, ಕೊಳ್ಳೇಗಾಲ, ಬೆಳಕವಾಡಿ, ಮಹದೇಶ್ವರ ಬೆಟ್ಟ ಮುಂತಾದ ಕಡೆ ಅವರು ಚಿತ್ರೀಕರಣ ಮಾಡಿದ್ದಾರೆ. “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ ಲೋಕೇಂದ್ರ.

ಅವರ ಜೊತೆಗೆ ಎ. ಮಹದೇವಯ್ಯ, ಅರ್ಜುನ ಕೃಷ್ಣ, ಚೈತ್ರ ಎಸ್‌.ಕೆ. ವಿನಯ್‌ ಕೂರ್ಗ್‌, ತಾತಗುಣಿ ಕೆಂಪೇಗೌಡ, ಎಂ.ಸಿ. ನಾಗರಾಜ್‌ ಮುಂತಾದ ಹಲವರು ನಟಿಸಿದ್ದಾರೆ. ವಿಜಯ್‌ ಚಂದ್ರ ಛಾಯಾಗ್ರಹಣ ಮಾಡಿದರೆ, ಯಶವಂತ್‌ ಭೂಪತಿ ಸಂಗೀತ ಸಂಯೋಜಿಸಿದ್ದಾರೆ. ಇವರೆಲ್ಲರೂ ಹೊಸಬರು ಎನ್ನುವುದು ವಿಶೇಷ. ಚಿತ್ರದಲ್ಲಿ ಎರಡು ಹಾಡುಗಳಿದ್ದು, “ಸಂಭವಾಮಿ ಯುಗೇ ಯುಗೇ, ಒಳ್ಳೇವ್ರಗೆಲ್ಲಾ ಹೊಗೆ ಹೊಗೆ …’ ಎಂಬ ಹಾಡನ್ನು ವಿಜಯಪ್ರಕಾಶ್‌ ಹಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next