Advertisement

ನೀರುಗಳ್ಳರ ವಿರುದ್ಧ ದೂರು ದಾಖಲಿಸಿ

09:18 AM Feb 03, 2019 | Team Udayavani |

ಚಿತ್ರದುರ್ಗ: ಶಾಂತಿಸಾಗರದ ನೀರನ್ನು ಜಮೀನುಗಳಿಗೆ ಅಕ್ರಮವಾಗಿ ಬಳಸಿಕೊಳ್ಳುತ್ತಿರುವವರ ವಿರುದ್ಧ ದೂರು ದಾಖಲಿಸಬೇಕು. ಇಲ್ಲದಿದ್ದರೆ ಪಿಡಿಒಗಳ ವಿರುದ್ಧವೇ ದೂರು ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಎಚ್ಚರಿಸಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಶಾಂತಿಸಾಗರ ಕುಡಿಯುವ ನೀರು ಯೋಜನೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರಸಭೆ, ಪಟ್ಟಣ ಪಂಚಾಯತ್‌, ಗ್ರಾಮ ಪಂಚಾಯತ್‌ ಪಿಡಿಒಗಳು ಕುಡಿಯುವ ನೀರು ಪೂರೈಕೆಯಲ್ಲಿ ಲೋಪ ಆಗದಂತೆ ಎಚ್ಚರ ವಹಿಸಬೇಕು. ಕಚೇರಿಯಲ್ಲಿ ಕುಳಿತು ಕಾಲ ಕಳೆಯುವ ಬದಲು ಶಾಂತಿಸಾಗರದ ನೀರಿನ ಮಾರ್ಗ ಮಧ್ಯೆ ಯಾರು ನೀರನ್ನು ಕಳವು ಮಾಡಿ ಜಮೀನುಗಳಿಗೆ ಹರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ನಾನು ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಜಮೀನುಗಳಿಗೆ ಅಕ್ರಮವಾಗಿ ನೀರು ಹರಿಯುತ್ತಿರುವುದು ಕಂಡು ಬಂದಲ್ಲಿ ಎಫ್‌ಐಆರ್‌ ದಾಖಲಿಸುತ್ತೇನೆ. ಹಾಗಾಗಿ ಮೈಚಳಿ ಬಿಟ್ಟು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಆಯಾ ಗ್ರಾಮಗಳಲ್ಲಿ ಪೈಪ್‌ಲೈನ್‌ ಅಳವಡಿಸಬೇಕು. ನೀರು ಬೇಕಾದವರು ಗ್ರಾಪಂಗಳಿಗೆ ಅರ್ಜಿ ಸಲ್ಲಿಸಿದಾಗ ನಲ್ಲಿಗಳಿಂದ ನೀರು ಕೊಡಿ. ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಕುಡಿಯುವ ನೀರಿನ ಲೈನ್‌ಗೆ ಮೀಟರ್‌ ಅಳವಡಿಸಲು ಟೆಂಡರ್‌ ಕರೆಯಬೇಕು. ದಿನದ 24 ಗಂಟೆ ನೀರು ಕೊಡುವುದು ಬೇಡ, ಓವರ್‌ಹೆಡ್‌ ಟ್ಯಾಂಕ್‌ ತುಂಬಿದ ಮೇಲೆ ವಾಲ್ವ್ ಬಂದ್‌ ಮಾಡಬೇಕು ಎಂದು ಸೂಚಿಸಿದರು.

ಓವರ್‌ಹೆಡ್‌ ಟ್ಯಾಂಕ್‌ಗಳನ್ನು ಎಲ್ಲಿ ತುಂಬಿಸಲು ಆಗುವುದಿಲ್ಲವೋ ಅಂತಹ ಗ್ರಾಮಗಳಲ್ಲಿ ಸಂಪ್‌ಗ್ಳಲ್ಲಿ ನೀರು ತುಂಬಿಸಿಕೊಂಡು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಿ. ಪ್ರತಿ ದಿನ ನಾಲ್ಕು ಗಂಟೆ ಮಾತ್ರ ನೀರು ಕೊಡಿ. ಉಳಿದಂತೆ ಚಿತ್ರದುರ್ಗ, ಜಗಳೂರಿಗೆ ನೀರು ಸರಬರಾಜು ಮಾಡಬೇಕು ಎಂದು ಆದೇಶಿಸಿದರು.

Advertisement

ನೀರು ಯಾವಾಗ ಬರುವುದಿಲ್ಲವೋ ಆಗ ಸಂಬಂಧಪಟ್ಟವರ ಗಮನಕ್ಕೆ ತನ್ನಿ. ಶಾಂತಿಸಾಗರದ ನೀರು ಬಂದಾಗ ಕೊಳವೆಬಾವಿ ನೀರನ್ನು ಬಳಸಬೇಡಿ. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿಕೊಂಡು ಬಾಕಿ ಇರುವ ನೀರಿನ ಕಂದಾಯ ಪಾವತಿಸಿ ಎಂದು ಎಲ್ಲಾ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಪಂ ಸಿಇಒ ಪಿ.ಎನ್‌. ರವೀಂದ್ರ ಮಾತನಾಡಿ, ಸಮರ್ಪಕವಾಗಿ ನೀರು ನೀಡಿಯೂ ಜನತೆಯಿಂದ ನೀರಿನ ಕಂದಾಯ ವಸೂಲಿ ಮಾಡದಿದ್ದರೆ ಹೇಗೆ, ಸುಲಭವಾಗಿ ಕುಡಿಯುವ ನೀರು ಸಿಕ್ಕರೆ ನಿಮಗೆ ಕಷ್ಟ ಗೊತ್ತಾಗುವುದಿಲ್ಲ. 14ನೇ ಹಣಕಾಸು ಯೋಜನೆಯಡಿ ಬೇರೆ ಬೇರೆ ಉದ್ದೇಶಗಳಿಗೆ ಹಣ ಖರ್ಚು ಮಾಡುವ ಬದಲು ಬಾಕಿ ಇರುವ ಕುಡಿಯುವ ನೀರಿನ ಕಂದಾಯ ಮೊದಲು ಪಾವತಿಸಿ. ನೀರಿನ ಕರವನ್ನು ವಸೂಲು ಮಾಡಲು ಆರಂಭಿಸಿದಾಗ ನಿಜವಾಗಿಯೂ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಮೇಲೆ ಜವಾಬ್ದಾರಿ ಇರುತ್ತದೆ ಎಂದು ತಿಳಿಸಿದರು.

ನೀರನ್ನು ಜನರಿಗೆ ತಲುಪಿಸಿದ ಮೇಲೆ ವರ್ಷಕ್ಕೆ 120 ರೂ. ಸಂಗ್ರಹಿಸಿ ಕೊಡುವ ಜವಾಬ್ದಾರಿ ನಿಮ್ಮದು. ಪಿಡಿಒಗಳ್ಯಾರು ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ಗ್ರಾಪಂ ಕಚೇರಿಗೆ ಹೋದರೆ ಕರ್ತವ್ಯದ ಸಮಯದಲ್ಲಿ ಇರುವುದಿಲ್ಲ. ಎಲ್ಲ ಪ್ರಯತ್ನ ಮಾಡಿ ಸುಮ್ಮನಾಗಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಚಂದ್ರಪ್ಪ ದೂರಿದರು.

ಚಿತ್ರದುರ್ಗ ತಾಪಂ ಅಧ್ಯಕ್ಷ ಲಿಂಗರಾಜು, ಇಒ ಕೃಷ್ಣ ನಾಯ್ಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್‌ ಹನುಮಂತಪ್ಪ, ನಗರಸಭೆ ಇಂಜಿನಿಯರ್‌ಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next