ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ, ಇನ್ನೂ ದೂರ ಸರಿಯದ ಕೊರೊನಾ ಸೇರಿದಂತೆ ಹಲವಾರು ಜಾಗತಿಕ ವಿಚಾರಗಳು ಬಹುತೇಕ ದೇಶಗಳ ಆರ್ಥಿಕತೆ ಮೇಲೆ ಇಂದಿಗೂ ಪೆಟ್ಟು ನೀಡುತ್ತಲೇ ಇವೆ. ದೇಶದ ಒಳಗೆ ಅಗತ್ಯ ವಸ್ತುಗಳ ಬೆಲೆ ಗಗನಮುಖೀಯಾಗಿದ್ದು, ಹಣದುಬ್ಬರವೂ ಹೆಚ್ಚಾಗುತ್ತಲೇ ಇದೆ. ಹಣದುಬ್ಬರ ಹೆಚ್ಚಾದಂತೆ, ಶ್ರೀಸಾಮಾನ್ಯನ ಬದುಕೂ ಮೂರಾಬಟ್ಟೆಯಾಗುತ್ತಿರುವುದು ಈಗಂತೂ ಎಲ್ಲರ ಕಣ್ಣಿಗೆ ಕಾಣಿಸುತ್ತಲೇ ಇದೆ.
ಏರುಗತಿಯಲ್ಲಿರುವ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇವಲ ಒಂದು ತಿಂಗಳ ಆಸುಪಾಸಿನಲ್ಲಿ ಮತ್ತೆ ರೆಪೋ ದರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏರಿಕೆ ಮಾಡಿದೆ. ಕಳೆದ ತಿಂಗಳ ಮೇ 4ರಂದು 40 ಬೇಸಿಸ್ ಪಾಯಿಂಟ್ಸ್‌ನಷ್ಟು ಏರಿಕೆ ಮಾಡಿದ್ದ ಅದು, ಈಗ 50 ಬೇಸಿಸ್ ಪಾಯಿಂಟ್ಸ್ ಏರಿಸಿದೆ. ವಿಚಿತ್ರವೆಂದರೆ ಇದರ ನೇರ ಹೊಡೆತ ಮಧ್ಯಮ ವರ್ಗಕ್ಕೇ ತಟ್ಟಲಿದೆ. ಅಂದರೆ, 50 ಬೇಸಿಸ್ ಪಾಯಿಂಟ್ಸ್ ಏರಿಕೆಯಿಂದಾಗಿ ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಿ ಗ್ರಾಹಕರು ಕಟ್ಟುವ ಇಎಂಐ ಮೊತ್ತ ಹೆಚ್ಚಳವಾಗಲಿದೆ. ಮೊದಲೇ ಹಣದುಬ್ಬರದ ಕಾರಣದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಮಧ್ಯಮ ವರ್ಗಕ್ಕೆ ಈ ರೀತಿಯೂ ಪ್ರತ್ಯಕ್ಷ ಹೊಡೆತ ಬೀಳುತ್ತಿದೆ.
ಆರ್‌ಬಿಐನ ಪ್ರಕಾರ, ರೆಪೋ ದರ ಏರಿಕೆಯಿಂದಾಗಿ ಬ್ಯಾಂಕ್‌ಗಳು ತನ್ನಲ್ಲಿ ತೆಗೆದುಕೊಳ್ಳುವ ಸಾಲ ಕಡಿಮೆಯಾಗುತ್ತದೆ. ಇದರಿಂದಾಗಿ ಅದು ಜನರಿಗೆ ನೀಡುವ ಸಾಲವೂ ಕಡಿಮೆಯಾಗಿ, ಅವರ ಖರೀದಿ ಸಾಮರ್ಥ್ಯ ಕುಂಠಿತವಾಗುತ್ತದೆ. ಆಗ ಪರೋಕ್ಷವಾಗಿ ವಸ್ತುಗಳ ಮೇಲಿನ ಬೇಡಿಕೆ ಕಡಿಮೆಯಾಗಿ, ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಆದರೆ ಆರ್‌ಬಿಐನ ಈ ಅರ್ಥಶಾಸ್ತ್ರದಿಂದಾಗಿ ಯಾವ ಪರಿಣಾಮ ಬೀರಲಿದೆ ಎಂಬ ವಿಶ್ಲೇಷಣೆಗಿಂತ, ಪೆಟ್ಟು ಮಾತ್ರ ಮಧ್ಯಮ ವರ್ಗದ ಜನರಿಗೇ ತಟ್ಟುತ್ತದೆ ಎಂಬುದನ್ನು ಈ ಅರ್ಥಶಾಸ್ತ್ರದಲ್ಲಿ ಮರೆತಂತೆ ಕಾಣುತ್ತದೆ.
ಅಲ್ಲದೆ ಸಾಲ ಸಿಗಲಿಲ್ಲ ಎಂಬ ಮಾತ್ರಕ್ಕೆ ಜನ ಖರೀದಿ ನಿಲ್ಲಿಸುತ್ತಾರೆ ಎಂಬುದು ಸುಳ್ಳು. ಈಗ ಹಣದುಬ್ಬರಕ್ಕೆ ಕಾರಣವಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ. ಅಗತ್ಯ ವಸ್ತುಗಳ ಖರೀದಿ ಇಲ್ಲದೇ ಜನ ಬದುಕುವುದು ಹೇಗೆ ಎಂಬ ಸರಳ ಸಂಗತಿಯನ್ನು ಹೇಳಲು ಆರ್‌ಬಿಐ ಮರೆತಂತೆ ಕಾಣುತ್ತಿದೆ.
ಅಲ್ಲದೆ ರೆಪೋ ದರ ಏರಿಕೆಯಿಂದ ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿದರ ಹೆಚ್ಚುತ್ತದೆ ಎಂಬುದು ಒಂದು ಪಾರ್ಶ್ವವಾದರೆ, ಮತ್ತೂಂದು ಪಾರ್ಶ್ವದಲ್ಲಿ ಜನರ ಠೇವಣಿ ಮೇಲಿನ ಬಡ್ಡಿದರವೂ ಹೆಚ್ಚಾಗುತ್ತದೆ. ಒಂದು ಲೆಕ್ಕಾಚಾರದಲ್ಲಿ ಇದು ಉತ್ತಮ ನಡೆ ಎಂದು ಹೇಳಬಹುದಾದರೂ ಕೊರೊನಾ ಅನಂತರದಲ್ಲಿ ಜನರ ಉಳಿತಾಯ ಸಾಮರ್ಥ್ಯ ಕಡಿಮೆಯಾಗಿದೆ ಎಂಬುದು ಒಪ್ಪಿಕೊಳ್ಳಬೇಕಾದ ವಿಚಾರ.
ಇವೆಲ್ಲದರ ನಡುವೆ ಒಂದು ಸಮಾಧಾನದ ವಿಚಾರವೆಂದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮತ್ತು ಇಳಿಕೆ ತಟಸ್ಥ ರೂಪದಲ್ಲಿ ಇದೆ ಎಂಬುದು. ಅಲ್ಲದೆ, ಇತ್ತೀಚೆಗಷ್ಟೇ ಕೇಂದ್ರ ಸರಕಾರ, ಅಬಕಾರಿ ಸುಂಕ ಇಳಿಕೆ ಮಾಡಿರುವುದರಿಂದ ಮಧ್ಯಮ ವರ್ಗದ ಜನ ಉಸಿರಾಡುವಂತೆ ಮಾಡಿದೆ. ಹಾಗೆಯೇ, ಆರ್‌ಬಿಐ, ರಾಜ್ಯ ಸರಕಾರಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಇಳಿಕೆ ಮಾಡುವಂತೆ ಮನವಿ ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಗಳು ಇಳಿಕೆ ಮಾಡಿದರೆ, ಆಗ ಜನರಿಗೆ ಒಂದಷ್ಟು ಸಮಾಧಾನವಾದರೂ ಸಿಕ್ಕಂತೆ ಆಗುತ್ತದೆ. ಇಲ್ಲವಾದರೆ ಇನ್ನಷ್ಟು ನಲುಗುವುದರಲ್ಲಿ ಯಾವುದೇ ಸಂದೇಹವಿಲ್ಲ.